Saturday, July 29, 2017

ಆತ್ಮ ನಿರೀಕ್ಷಣೆಯ ಸಮಯ

ಮೊನ್ನೆ ತಾನೇ ಹುದ್ದೆಯಿಂದ ನಿವೃತ್ತರಾದ ನಮ್ಮ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಒಂದೆರಡು ವಿಚಾರಗಳು ದೇಶದ ನಾಗರಿಕರನ್ನು ಆತ್ಮ ನಿರೀಕ್ಷಣೆಗೆ ಹಚ್ಚುವಂತಿದ್ದವು. ಅವರ ಮಾತುಗಳು ಹೀಗೆ ಸಾಗಿದ್ದವು-

"ಭಾರತದ ಆತ್ಮ ಇರುವುದೇ ಬಹುತ್ವ ಮತ್ತು ಸಹಿಷ್ಣುತೆಗಳಲ್ಲಿ. ಭಾರತವು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ. ಅದರಲ್ಲಿ   ಹಲವು ವಿಚಾರಗಳ ಇತಿಹಾಸ, ತತ್ತ್ವಶಾಸ್ತ್ರ, ಬೌದ್ಧಿಕತೆ, ಕೈಗಾರಿಕಾ ಕುಶಲಕಲೆ, ನವೋನ್ವೇಷಣೆ ಮತ್ತು ಅನುಭವಗಳು ಸಮ್ಮಿಳಿತವಾಗಿವೆ. ನಮ್ಮ ಸಮಾಜದ ಬಹುತ್ವ ನಿರ್ಮಾಣವಾಗಿರುವುದು  ಶತಮಾನಗಳ ಕಾಲದ ಹಲವಾರು ವಿಚಾರಗಳ ಸಮ್ಮಿತಗೊಂಡಿರುವದರಿಂದ. ಸಂಸ್ಕೃತಿ, ಮತ ಮತ್ತು ಭಾಷೆಗಳ ವೈವಿಧ್ಯತೆಗಳೇ ಭಾರತವನ್ನು ವಿಶೇಷವಾಗಿಸುವ ಅಂಶಗಳು. ಶತಮಾನಗಳ ಕಾಲ ಇದು ನಮ್ಮ ಸಮಷ್ಟಿ ಪ್ರಜ್ಞೆಯ ಭಾಗವಾಗಿರುವಂತಹದ್ದು. ನಮ್ಮ ಸಾರ್ವಜನಿಕ ಸಂವಾದದಲ್ಲಿ ಹಲವಾರು ಭಿನ್ನ ಎಳೆಗಳಿವೆ. ನಾವು ವಾದಿಸಬಹುದು. ಒಪ್ಪಬಹುದು, ಒಪ್ಪದೇ ಇರಬಹುದು. ಆದರೆ ಈ ವಿವಿಧ ಅಭಿಪ್ರಾಯಗಳ ಇರುವಿಕೆಯನ್ನು ನಾವು ಅಲ್ಲಗಳೆಯಲಾಗದು. ಹಾಗೇನಾದರೂ ಮಾಡಿದರೆ ನಮ್ಮ ಆಲೋಚನಾ ರೀತಿಯ ಒಂದು ಮೂಲಭೂತ ಗುಣವೇ ಕರಗಿಹೋಗುವುದು."

"ಕರುಣೆ ಮತ್ತು ಅನುಕಂಪ ನಮ್ಮ ನಾಗರಿಕತೆಯ ನಿಜವಾದ ಅಡಿಗಲ್ಲು. ಆದರೆ ನಿತ್ಯವೂ ನಮ್ಮ ಸುತ್ತ ಮುತ್ತ ಹಿಂಸೆ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ.  ಈ ಹಿಂಸೆಯ ಕೇಂದ್ರದಲ್ಲಿರುವುದು ನಮ್ಮಲ್ಲಿರುವ ಅಂಧಃಕಾರ, ಭಯ ಮತ್ತು ಅಪನಂಬಿಕೆ. ನಾವು ನಮ್ಮ ಸಾರ್ವಜನಿಕ ವಿಚಾರ ವಿನಿಮಯವನ್ನು ಎಲ್ಲ ಬಗೆಯ ಹಿಂಸೆಯಿಂದ ಮುಕ್ತಗೊಳಿಸಬೇಕು. ಅಹಿಂಸಾತ್ಮಕ ಸಮಾಜದಲ್ಲಿ ಮಾತ್ರ ಎಲ್ಲ ವರ್ಗದ ಜನರ ಒಳಗೊಳ್ಳುವಿಕೆ ಸಾಧ್ಯ. ಅದರಲ್ಲೂ ಅಂಚಿನಲ್ಲಿರುವವರನ್ನು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಯಿಂದ ಹೊರಗಿರುವವರನ್ನು ಒಳಗೊಳ್ಳಬೇಕು. ಅಹಿಂಸೆಯ ಶಕ್ತಿಯನ್ನು ಮರಳಿ ಸ್ಥಾಪಿಸುವ ಮೂಲಕವೇ ಅನುಕಂಪ ಮತ್ತು ಕಾಳಜಿಯನ್ನುಳ್ಳ ಸಮಾಜವನ್ನು ಕಟ್ಟಬೇಕು."

ಮಾಜಿ ರಾಷ್ಟ್ರಪತಿಯವರ ಈ ಮಾತುಗಳನ್ನು ಕೇಳುವಾಗ ದೇಶದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಬಿ ಆರ್. ಅಂಬೇಡ್ಕರ್ ಅವರ  ಭಾಷಣವೊಂದು ನೆನಪಿಗೆ ಬಂತು.

೧೯೪೮ರಲ್ಲಿ ಸಂವಿಧಾನ ರಚನಾ ಸಭೆಯ ಎದುರು ನೂತನ ಸಂವಿಧಾನದ ಪ್ರತಿಯನ್ನು ಮಂಡಿಸಿ ಮಾತನಾಡುತ್ತ ಡಾ. ಬಿ ಆರ್. ಅಂಬೇಡ್ಕರ್ ಅವರು ಮುನ್ನೆಚ್ಚರಿಕೆ ರೂಪದಲ್ಲಿ ಹೇಳಿದ ಮಾತುಗಳಿವು -

"ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಆಸಕ್ತಿ ಇರುವ ಎಲ್ಲರಿಗೆ ಜಾನ್ ಸ್ಟುವರ್ಟ್ ಮಿಲ್ ನೀಡಿರುವ ಎಚ್ಚರಿಕೆ ನೆನಪಿನಲ್ಲಿರಬೇಕು. ಅದೇನೆಂದರೆ- ಎಷ್ಟೇ ಶ್ರೇಷ್ಟ ವ್ಯಕ್ತಿಯಾಗಿದ್ದರೂ ನಮ್ಮ ಸ್ವಾತಂತ್ರ್ಯವನ್ನು  ಆ ವ್ಯಕ್ತಿಯ ಪಾದಗಳ ಮುಂದೊಯ್ದು  ಇಡಬಾರದು, ಅಥವಾ ದೇಶದಲ್ಲಿ ಕಟ್ಟಿ ಬೆಳೆಸಿರುವ ಸಂಸ್ಥೆಗಳ ರೂಪವನ್ನೇ ಬದಲಿಸುವ ಶಕ್ತಿಯನ್ನು ಅವರಿಗೆ ಕೊಡಬಾರದು. ದೇಶಕ್ಕೆ ಸೇವೆ ಸಲ್ಲಿಸಿರುವವರಿಗೆ ಕೃತಜ್ಞತೆ ತೋರುವುದು ತಪ್ಪಲ್ಲವಾದರೂ ಕೃತಜ್ಞತೆಗೆ ಮಿತಿಗಳಿವೆ. ಈ ಎಚ್ಚರಿಕೆ ಬೇರಾವುದೇ ದೇಶಕ್ಕಿಂತ ಹೆಚ್ಚು ಅಗತ್ಯವಾಗಿರುವುದು ಭಾರತಕ್ಕೆ. ಏಕೆಂದರೆ ಬೇರಾವುದೇ ದೇಶಕ್ಕಿಂತ ಭಾರತದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆ ರಾಜಕೀಯದಲ್ಲಿ ನಡೆಯುತ್ತದೆ. ಧರ್ಮದ ವಿಚಾರದಲ್ಲಿ ಭಕ್ತಿಯು ಮುಕ್ತಿಗೆ ಮಾರ್ಗವಾಗಿರಬಹುದು. ಆದರೆ ರಾಜಕಾರಣದಲ್ಲಿ  ಭಕ್ತಿಯು ದಮನಕ್ಕೆ ಮತ್ತು ಸರ್ವಾಧಿಕಾರಕ್ಕೆ ದಾರಿಯಾಗುವುದು ಖಂಡಿತ. "

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಡಿದ ಅಂದಿನ ನಮ್ಮ ರಾಷ್ಟ್ರ ನಾಯಕರು ಸ್ವತಂತ್ರ ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ಸಹಬಾಳ್ವೆ, ಸ್ವಾವಲಂಬನೆ, ಸ್ವಾಭಿಮಾನಗಳು ಮುಖ್ಯ ಗುಣಗಳಾಗಬೇಕೆಂದು ಬಯಸಿದ್ದರು.

ಜವಾಹರಲಾಲ್ ನೆಹರೂ  ಧರ್ಮಗಳು ಹೇಗೆ ಮನಸ್ಸುಗಳನ್ನು ಬಂಧನದಲ್ಲಿಡಬಹುದೆಂಬ ಬಗ್ಗೆ ತಮ್ಮ ಆತ್ಮಕತೆಯಲ್ಲಿ ಹೀಗೆ ಬರೆಯುತ್ತಾರೆ-

"ಸದಾ ಹಿಮ್ಮ್ಮುಖವಾಗಿ ನೋಡುತ್ತಾ, ತಮ್ಮಿಂದ ಕಳಚಿಹೋಗುತ್ತಿರುವುದನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಾಣುವ ಹಿಂದೂಗಳು ಮತ್ತು ಮುಸ್ಲಿಮರು ಶೋಚನೀಯವಾಗಿ ಕಾಣುತ್ತಾರೆ. ಹಿಂದಿನದೆಲ್ಲವನ್ನೂ ತಿರಸ್ಕರಿಸುವುದಾಗಲಿ ಅವಹೇಳನ ಮಾಡುವುದಾಗಲಿ ನನ್ನ ಇಚ್ಛೆಯಲ್ಲ. ಏಕೆಂದರೆ ಅತ್ಯಂತ ಸುಂದರವಾದದ್ದೂ  ನಮ್ಮ ಗತಕಾಲದಲ್ಲಿ ಇದೆ. ಅದು  ಭವಿಷ್ಯದಲ್ಲೂ ಉಳಿಯುತ್ತದೆ. ಆದರೆ ಈ ಜನರು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವುದು ಸುಂದರವಾದದ್ದನ್ನಲ್ಲ.  ಬದಲಿಗೆ, ಅನುಪಯುಕ್ತವಾದದ್ದು. ಮತ್ತು ಬಹಳಷ್ಟು ಸಲ ಹಾನಿಕಾರವಾದದ್ದೂ. "

ಹಿಂದೂ ರಾಷ್ಟ್ರವಾದಿ ನಾಯಕರುಗಳಿಗೆ ಧರ್ಮಕ್ಕಿಂತ ಮಿಗಿಲಾದ ಅದರ್ಶಗಳೇ ಕಾಣಲಿಲ್ಲ. ಧರ್ಮವನ್ನು ರಾಜಕೀಯದಿಂದ ಹೊರಗೆ ಇಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಶ್ಯಕ. ಧರ್ಮದ ಹೆಸರಲ್ಲಿ ಧ್ರುವೀಕರಣಗೊಳಿಸದೆ ಕೇವಲ ಕ್ಷಮತೆ, ಚಾರಿತ್ರ್ಯ, ಸಾಧನೆಗಳ ಬಲದಲ್ಲಿ ಗೆಲ್ಲುವ ವಿಶ್ವಾಸ ನಮ್ಮ ಮಹಾನ್ ನಾಯಕರುಗಳಿಗಿಲ್ಲ. ಇದೆಲ್ಲ ಬಗೆಹರಿಯುವ ಸೂಚನೆಗಳೇ ಕಾಣುತ್ತಿಲ್ಲ.

ವಿವಿಧ ಬಗೆಯ ಧಾರ್ಮಿಕ ಸಂಘಟನೆಗಳು ನೀಡುವ ಅಘೋಷಿತ ಕಾನೂನು ಬಾಹಿರ ಅಧಿಕಾರ ಇವು  ಕೆಲವರಿಗೆ ಆಕರ್ಷಣೆಯಾಗಿವೆ. ಕೆಲವು ಕಡೆ ನಿರುದ್ಯೋಗಿಗಳು, ಅಂಚಿನಲ್ಲಿರುವವರು, ಎಲ್ಲರೊಂದಿಗೆ ಒಂದಾಗಲಾಗದೇ ಒಂದು ಬಗೆಯ ಪರಕೀಯ ಭಾವನೆಯಲ್ಲಿ ನರಳುವವರು, ಇಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ರಾಜಕೀಯ ಗುಂಪುಗಳಲ್ಲಿ ಸೇರುವುದು ಕಾಣಬರುತ್ತಿದೆ. ಗಲಭೆ, ದೊಂಬಿ, ಗುಂಪು ದಾಳಿ ಇಂತವನ್ನೆಲ್ಲ ನಡೆಸುವವರು ಇವರೇ.

ಇನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದೇ ಪರಿಗಣಿಸಲ್ಪಡುವ ಮಾಧ್ಯಮ ಕ್ಷೇತ್ರ ಅದರಲ್ಲೂ ಮುಖ್ಯವಾಗಿ ಟೆಲಿವಿಜನ್ ಮಾಧ್ಯಮವು  ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ  ಆಳುವ ಪಕ್ಷದ ಗುಣಗಾನದಲ್ಲೇ  ತೊಡಗುತ್ತಿರುವ ಬೆಳವಣಿಗೆ  ಆರೋಗ್ಯಕರವಾದದ್ದಲ್ಲ. ಜಾರ್ಜ್ ಆರ್ವೆಲ್ ನ 'ಅನಿಮಲ್ ಫಾರ್ಮ್'ನಲ್ಲಿ ಬಂಡಾಯಕ್ಕೆ ಸಿದ್ದವಾದ ಪ್ರಾಣಿಗಳೆಲ್ಲ ಸೇರಿ ಫಾರಂನ ಯಜಮಾನರ ವಿರುದ್ಧ ಕೂಗಲು ಹುಟ್ಟು ಹಾಕುವ ಸ್ಲೋಗನ್ "ಫೋರ್ ಲೆಗ್ಸ್ ಗುಡ್ ಟೂ ಲೆಗ್ಸ್ ಬ್ಯಾಡ್"ನಂತೆ ಇಂದಿನ ಚರ್ಚೆಗಳಲ್ಲೂ ಅಷ್ಟೇ ಸಿದ್ದ ಸ್ಲೋಗನ್ ಗಳದ್ದೇ ರಾಜ್ಯ. 

ಗುಂಪು ಕಟ್ಟಿಕೊಂಡು ಅಮಾಯಕರ ಹತ್ಯೆ ಮಾಡುತ್ತಿರುವವರನ್ನು, ಅವರ ಬೆನ್ನಿಗೆ ನಿಲ್ಲುವವರನ್ನು ನೋಡುತ್ತಿರುವ ಈ ದಿನಗಳಲ್ಲಿ  ಹೌದು 'ಟೂ ಲೆಗ್ಸ್ ಬ್ಯಾಡ್'.

ಸಾಮಾಜಿಕ  ಮಾಧ್ಯಮಗಳು ಬಂದ  ಮೇಲಂತೂ ನಾಗರಿಕ ಸಂವಾದವೇ ಮರೆಯಾಗುತ್ತಿದೆ. ಸುಳ್ಳುಸುದ್ದಿಗಳನ್ನು ಹರಡಲು  ಇಂತಹ ಮಾಧ್ಯಮಗಳ ಬಳಕೆಯಾಗುತ್ತಿದೆ.  ಎಲ್ಲಕ್ಕಿಂತ ಬೇಸರದ ಸಂಗತಿಯೆಂದರೆ ಪೂರ್ವಾಗ್ರಹಗಳಿಲ್ಲದೆ, ಹೊಸ ದೃಷ್ಟಿಯಿಂದ ವಿಚಾರ ಮಾಡುವ ಸಾಧ್ಯತೆಯಿದ್ದ ನಮ್ಮ ಹೊಸ ತಲೆಮಾರಿನವರು ಸಹ ನಮ್ಮ ರಾಜಕೀಯ, ಸಾಮಾಜಿಕ ಸಮಸ್ಯೆಗಳ ಹಿನ್ನೆಲೆ, ಜಟಿಲತೆಗಳನ್ನು ಅರಿಯುವ ಗೋಜಿಗೆ ಹೋಗದೆ  ರಾಜಕೀಯ ದಾಳಗಳಾಗುತ್ತಿರುವುದು. ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯ ಅಭಿಮತವು ದಬ್ಬಾಳಿಕೆಗೆ ಬಳಸಲ್ಪಡಬಾರದೆಂಬ ಅರಿವು, ಮಾನವೀಯತೆ, ನ್ಯಾಯವಂತಿಕೆ ಇವೆಲ್ಲವನ್ನೂ ಮರೆತ ಸ್ಥಿತಿಯಲ್ಲಿ ನಾವಿದ್ದೇವೆ.

ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಯವಾದ ಸೂಚನೆ  ಹಾಗೂ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಖಚಿತ ಎಚ್ಚರಿಕೆ ಇವೆರಡನ್ನೂ ಗಂಭೀರವಾಗಿ  ಪರಿಗಣಿಸುವ  ಅಗತ್ಯ ಇಂದು ಖಂಡಿತವಾಗಿಯೂ ಇದೆ.

Saturday, March 11, 2017

ಘಾಚರ್ ಘೋಚರ್ - ವಿವೇಕ್ ಶಾನಭಾಗ್






ಈ ಕಾದಂಬರಿಯ ನಿರೂಪಕ ಒಬ್ಬ ನಗರವಾಸಿ ಮಧ್ಯಮ ವರ್ಗದ ಯುವಕ. ಕೂಡು ಕುಟುಂಬದವನಾದ ಇವನ ಕುಟುಂಬದವರು ಒಂದು ಕಾಲದಲ್ಲಿ ತೀರಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ನಂತರ ಇವನ ಚಿಕ್ಕಪ್ಪ ಆರಂಭಿಸಿದ ಮಸಾಲೆ ಪದಾರ್ಥಗಳ ವ್ಯವಹಾರದಿಂದ ಒಮ್ಮಿಂದೊಮ್ಮೆಲೆ ಹಣವಂತರಾದವರು. ಇಕ್ಕಟ್ಟಾದ, ರೈಲ್ವೆ ಬೋಗಿಗಳಂತಹ ಕೋಣೆಗಳ ಮನೆಯಿಂದ, ಪ್ರತಿಷ್ಟಿತ ಬಡಾವಣೆಯ ವಿಶಾಲವಾದ ಮನೆಗೆ ಕುಟುಂಬವು ಸ್ಥಳಾಂತರವಾದಾಗ ಹೊಸ ಜೀವನ ಶೈಲಿಗೆ ಹೊಂದಿಕೊಳ್ಳುವ ಸನ್ನಾಹದಲ್ಲಿ  ಪರಸ್ಪರ ಸಂಬಂಧಗಳು, ಮನೋಭಾವಗಳು, ನಿಷ್ಟೆ ಗಳು ಬದಲಾಗುತ್ತವೆ. ಅದ್ಧೂರಿಯಿಂದ ನಡೆಸುವ ಮದುವೆಗಳು ಮುರಿದು ಬೀಳುತ್ತ ವೆ. ಒಳಗೊಳಗೇ ಮೌನ ಯುದ್ಧಗಳು ಆರಂಭವಾಗುತ್ತವೆ. ಎಲ್ಲವೂ ಘಾಚರ್ ಘೋಚರ್ ಆಗಿಬಿಡುತ್ತದೆ.  ಸಂಕ್ಷೇಪವಾಗಿ ಹೇಳುವುದಾದರೆ ಇದಿಷ್ಟು ಇಲ್ಲಿ ನಡೆಯುವ ಕತೆ.

ಕಳೆದ ಎರಡು ಮೂರು ದಶಕಗಳಲ್ಲಿ, ಮುಖ್ಯವಾಗಿ ಜಾಗತೀಕರಣ ಮತ್ತು ನವೋದ್ಯಮಗಳು ದೇಶದಲ್ಲಿ ತಂದಿರುವ ಆರ್ಥಿಕ ಪ್ರಗತಿ ಮತ್ತದರ  ಸಾಮಾಜಿಕ ಹಾಗೂ ಕೌಟುಂಬಿಕ ಪರಿಣಾಮಗಳು ಇವು ಎಲ್ಲರ ಅನುಭವವೇನೋ ನಿಜ. ಆದರೆ ಈ ಬದಲಾವಣೆಗಳು ಗಮನಕ್ಕೇ ಬಂದಿರುವುದಿಲ್ಲ. ಸೂಕ್ಷ್ಮ ಸಂವೇದನೆಯುಳ್ಳ ಸಾಹಿತಿ ಕನ್ನಡಿ ಹಿಡಿದು ತೋರಿಸಿದಾಗಲೇ ದೈನಂದಿನ ಜೀವನದಲ್ಲಿ ನಡೆಯುವ  ಅನೇಕ ವಿಪರೀತಗಳು, ಸೂಕ್ಷ್ಮ ಕ್ರೌರ್ಯಗಳು ನಮಗೆ ಹೊಳೆಯುವುದು. 

ಇಂದಿನ ಬದಲಾಗುತ್ತಿರುವ ಮೌಲ್ಯಗಳು , ಮರೆಯಾಗುತ್ತಿರುವ ಸಣ್ಣ ಪುಟ್ಟ ಸೌಜನ್ಯಗಳು , ಸ್ವಕೇಂದ್ರಿತ ಮನೋಭಾವಗಳು, ಅಂತಸ್ತಿನ ಅಹಂಕಾರಗಳು, ಎಲ್ಲವೂ  ಕತೆಯಲ್ಲಿ ತಣ್ಣನೆಯ ದನಿಯಲ್ಲಿ, ನವಿರಾದ ನಿರೂಪಣೆಯ ಮೂಲಕ ಅನಾವರಣಗೊಳ್ಳುವ ಬಗೆ  ಅಂತಃಕರಣವಿರುವ ಯಾರನ್ನೂ ಪ್ರಕ್ಷುಬ್ಧಗೊಳಿಸದೇ ಇರಲಾರದು.

ಒಂದೆಡೆ ನಿರೂಪಕ ಹಣದ ಪರಿಣಾಮದ ಬಗೆಗೆ ಹೀಗೆ ಹೇಳುತ್ತಾನೆ- "ದುಡ್ಡು ನಮ್ಮನ್ನೇ ಅಡಿಸುತ್ತದೆ ಅನ್ನುವ ಮಾತು ಸುಳ್ಳಲ್ಲ. ಅದಕ್ಕೂ ಒಂದು ಸ್ವಭಾವ, ಶಕ್ತಿ ಇರುತ್ತದೆಯೋ ಏನೋ." ಕನ್ನಡದ ಅನೇಕ ಗಾದೆಗಳೂ ಅತ್ಯಂತ ಪರಿಣಾಮಕಾರಿಯಾಗಿ ಈ ಕೃತಿಯಲ್ಲಿ ಬಳಕೆಯಾಗಿವೆ. ಉದಾಹರಣೆಗೆ- ಎಲ್ಲರ ಮನೆಯ ದೋಸೆಯೂ ತೂತೇ, ದುಡ್ಡು ಬಂತೂ ಅಂತ ಬೆಳದಿಂಗಳಲ್ಲೂ ಕೊಡೆ ಹಿಡಿದರಂತೆ, ಸಿರಿ ಗರದ ಹಾಗೆ ಬಡಿಯಬಾರದು ಮರದ ಹಾಗೆ ನಿಧಾನ ಬೆಳೆಯಬೇಕು,...ಇತ್ಯಾದಿ.

'ಘಾಚರ್ ಘೋಚರ್' ಮೊದಲಿಗೆ, 2013 ರಲ್ಲಿ ಪ್ರಕಟವಾಗಿದ್ದು ಅದೇ ಹೆಸರಿನ ಕತಾ ಸಂಗ್ರಹದ ಒಂದು ಕತೆಯಾಗಿ. 2015 ರಲ್ಲಿ ಇದು ಕಾದಂಬರಿ ರೂಪದಲ್ಲಿ ಇಂಗ್ಲಿಷಿಗೆ ಅನುವಾದವಾದ ನಂತರ ಪಡೆದಿರುವ ಪ್ರಸಿದ್ಧಿ ಅದ್ಭುತ. ಈ ವರ್ಷ ಅಮೆರಿಕದಲ್ಲೂ ಪೆಂಗ್ವಿನ್ ಪ್ರಕಾಶನದಡಿ ಇದು ಪ್ರಕಟವಾಗಿ ಸಾಕಷ್ಟು ಚರ್ಚೆ ಹಾಗೂ ಪ್ರಶಂಸೆ ಗಳಿಸಿದೆ.

ಅನುವಾದದ ಮೂಲಕ BBC, Publisher's Weekly, New Yorker, ಇತ್ಯಾದಿ ಪ್ರತಿಷ್ಟಿತ ವಿದೇಶಿ ಮಾಧ್ಯಮ ಸಮೂಹಗಳ ಮನ್ನಣೆ ಗಳಿಸಿರುವ ಘಾಚರ್ ಘೋಚರ್ ಕೃತಿಯು ಮೂಲ ಭಾಷೆಯಾದ ಕನ್ನಡದಲ್ಲೇ ಅದೇಕೋ ಅಷ್ಟೊಂದು ಚರ್ಚೆಯಾಗಲಿಲ್ಲ. ಕನ್ನಡದಲ್ಲಿ ಸಹೃದಯ ಓದುಗರ ಕೊರತೆ ಇದಕ್ಕೆ ಕಾರಣವೋ ಅಥವಾ 'ಹಿತ್ತಲ ಗಿಡ ಮದ್ದಲ್ಲ' ಎನ್ನುವಂತೆ ಕನ್ನಡಿಗರಿಗೂ ಇಂಗ್ಲಿಷ್ ಆವೃತ್ತಿಯೇ ಪ್ರಿಯವೋ ಗೊತ್ತಿಲ್ಲ.

ವಿಶ್ವದಾದ್ಯಂತ ಪುಸ್ತಕ ಪ್ರೇಮಿಗಳ ನೆಚ್ಚಿನ ಅಂತರ್ಜಾಲ ತಾಣವಾದ goodreads.com ನಲ್ಲೂ ಘಾಚರ್ ಘೋಚರ್ ನ್ನು ಮೆಚ್ಚಿರುವ, ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವವರ ಸಂಖ್ಯೆ 700 ಕ್ಕೂ ಹೆಚ್ಚು. ವಿವೇಕರ ಉಳಿದ  ಕಾದಂಬರಿಗಳಿಗಿಂತ ಘಾಚರ್ ಘೋಚರ್ ಹೆಚ್ಚು ಆಕರ್ಷಣೆಗೆ ಒಳಗಾಗಿರುವುದಕ್ಕೆ ಬಹುಶಃ ಈ ಕೃತಿಯು ಸಂಪೂರ್ಣ ನಗರ ಕೇಂದ್ರಿತ ಕತೆಯನ್ನು ಹೊಂದಿರುವುದು ಕಾರಣವಾಗಿರಬಹುದು.

ಘಾಚರ್ ಘೋಚರ್ ನ ಪ್ರಖ್ಯಾತಿಯು  ಅವರ ಇತರ ಕಾದಂಬರಿಗಳನ್ನೂ ಮತ್ತು ಕನ್ನಡದ ಇತರ ಲೇಖಕರ ಕಾದಂಬರಿಗಳನ್ನೂ ಮುಂಚೂಣಿಗೆ ತಂದು ಅವುಗಳ ಓದು, ವಿಮರ್ಶೆ, ಚರ್ಚೆಗಳಿಗೆ ಕಾರಣವಾದರೆ ಒಳ್ಳೆಯದು.  ಧಾವಂತದ ಇಂದಿನ ಬದುಕಿನಲ್ಲೂ ಕತೆ, ಕಾದಂಬರಿಗಳ ಓದಿನ ಅಗತ್ಯ ಇದೆ. 

ಸಾಹಿತ್ಯದ ಅಗತ್ಯತೆಯ ಕುರಿತು ಚಿತ್ತಾಲರು ತಮ್ಮ ಒಂದು ಲೇಖನದಲ್ಲಿ ಹೀಗೆ ಬರೆದಿದ್ದರು-
"ನಾವು ವಿಚಾರ ಮಾಡುವ, ಭಾವಿಸುವ, ಹಾಗೂ ನೋಡುವ ಮಟ್ಟಗಳು (standards of thinking, standards of feeling, standards of seeing) ಎತ್ತರಗೊಂಡು ನಾವು ಮಾನವರಾಗಿ ಅರಳುವ ಸಾಧ್ಯತೆಯೇ ಸಾಹಿತ್ಯ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯೆಂದು ನಾನು ನಂಬುತ್ತೇನೆ. ಬದುಕಿನ ಬಗ್ಗೆ ನಾವು ಬೆಳೆಯಿಸಿಕೊಂಡ ತಪ್ಪು ಅಪೇಕ್ಷೆಗಳಿಂದಾಗಿ ಮನುಷ್ಯ-ಜೀವನಕ್ಕೆ ಅರ್ಥ ತಂದುಕೊಡಬಹುದಾದಂಥ ಗಂಭೀರ ಭಾವನೆಗಳೇ ಭ್ರಷ್ಟವಾಗುತ್ತ, ನಮ್ಮ ಸಾಮಾಜಿಕ ಜೀವನದ ಮೇಲೆ, ರಾಜಕೀಯ ನಡವಳಿಕೆಯ ಮೇಲೆ ಅತ್ಯಂತ ದುಷ್ಟವಾದ, ಅನಾರೋಗ್ಯಕರವಾದ ಪರಿಣಾಮ ಉಂಟಾಗುತ್ತಿರುವ ಇಂದಿನ ಕಾಲದಲ್ಲಿ, ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವುಗಳನ್ನು ಕಾಪಾಡಿಕೊಳ್ಳುವುದರಲ್ಲಿ ಕಲೆಗಳು, ಬಹು ಮುಖ್ಯವಾಗಿ ಸಾಹಿತ್ಯ ವಹಿಸಬಹುದಾದ ಪಾತ್ರವನ್ನು ಒತ್ತಿ ಹೇಳಿದಷ್ಟೂ ಕಡಿಮೆಯೆನಿಸುತ್ತದೆ." 

ಚಿತ್ತಾಲರು  ನಲವತ್ತು ವರ್ಷಗಳ ಹಿಂದೆ ಬರೆದ ಈ ಸಾಲುಗಳು ಇಂದಿಗೂ ಖಂಡಿತವಾಗಿಯೂ ಪ್ರಸ್ತುತವೇ. ಘಾಚರ್ ಘೋಚರ್ ನಂತಹ ಕೃತಿಯು ಚಿತ್ತಾಲರ ಆಶಯದ ಅಂತಹದ್ದೇ ಸಾಹಿತ್ಯದ ಮಾದರಿ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಕೃತಿಯು ಚಿತ್ತಾಲರಿಗೇ ಅರ್ಪಣೆಯಾಗಿರುವುದು ಅತ್ಯಂತ ಔಚಿತ್ಯಪೂರ್ಣ.