Sunday, November 22, 2015

ಹುಳಿಮಾವು ಮತ್ತು ನಾನು - ಇಂದಿರಾ ಲಂಕೇಶ್



ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ತಮ್ಮ 'ಲಂಕೇಶ್ ಪತ್ರಿಕೆ'ಯ ಮೂಲಕ ಒಂದು ಹೊಸ ಓದುಗ ವರ್ಗವನ್ನೆ ಸೃಷ್ಟಿಸಿ, ಭಾಷೆಯ ವಿಶಿಷ್ಟ ಸಾಧ್ಯತೆಗಳ ಅರಿವು ಮಾಡಿಕೊಟ್ಟವರು ಲಂಕೇಶ್. ಅತ್ಯಂತ ಸಂಕೀರ್ಣ ವಿಚಾರಗಳನ್ನೂ ತೀರ ಸರಳ ಆದರೂ ಪರಿಣಾಮಕಾರಿಯಾದ ಶೈಲಿಯಲ್ಲಿ ಬರೆಯುವ ಸಾಧ್ಯತೆಯನ್ನು ಪರಿಚಯಿಸಿದ್ದೇ ಲಂಕೇಶ್. ೨೦೦೦ ದ ಇಸವಿಯಲ್ಲಿ ತಮ್ಮ ೬೬ ನೇ ವಯಸ್ಸಿಗೇ ತೀರಿಕೊಂಡ ಈ ಲೇಖಕನ ಸಾವು ಅನಿರೀಕ್ಷಿತವಾಗಿತ್ತು. ತಮ್ಮ ಅಗಲಿದ ಸಂಪಾದಕನಿಗೆ ಗೌರವ ಸೂಚಿಸುವ ಸಲುವಾಗಿ ಲಂಕೇಶ್ ಪತ್ರಿಕೆಯವರು ಸಿದ್ಧಪಡಿಸಿದ್ದ  "ಇಂತಿ ನಮಸ್ಕಾರಗಳು" ಎಂಬ ಶೀರ್ಷಿಕೆಯನ್ನು ಹೊತ್ತ ಸಂಚಿಕೆ ಇನ್ನೂ ನನ್ನ ಬಳಿಯಿದೆ. ಅಸಾಧಾರಣ ಪ್ರತಿಭೆಯ, ಹಾಗೆಯೇ ಒಂದು ರೀತಿಯ ವಿಕ್ಷಿಪ್ತ ವ್ಯಕ್ತಿತ್ವದ ಲಂಕೇಶರು ಒಬ್ಬೊಬ್ಬರನ್ನೂ ತಟ್ಟಿದ, ಪ್ರಭಾವಿಸಿದ ಬಗೆಯೂ ವಿಶಿಷ್ಟ.  ಇಂತಹ ಒಬ್ಬ ವ್ಯಕ್ತಿಯ ವೈಯಕ್ತಿಕ ಬದುಕಿನ ವಿವರಗಳ ಬಗೆಗಿನ ಕುತೂಹಲ ಸಹಜವೇ. ಲಂಕೇಶರು "ಹುಳಿಮಾವಿನ ಮರ" ಎಂಬ ಹೆಸರಿನಲ್ಲಿ ತಮ್ಮ ಆತ್ಮಕಥೆಯನ್ನು ಪ್ರಕಟಿಸಿದ್ದಾರಾದರೂ ಕೆಲವೊಮ್ಮೆ ಮಹಾನ್ ವ್ಯಕ್ತಿಗಳ ಜೀವನದ ಬಿಡಿ ವಿವರಗಳು ಅವರೇ ಬರೆದ ಆತ್ಮಕಥೆಗಳಿಗಿಂತ ಅವರ ಹತ್ತಿರದವರು ಬರೆವ ಕೃತಿಗಳಲ್ಲೇ ಹೆಚ್ಚಾಗಿ ಸಿಗುತ್ತವೆ. ಕುವೆಂಪು ಅವರ ವಿಚಾರದಲ್ಲೂ ಇದು ಅನುಭವಕ್ಕೆ ಬಂದಿತ್ತು. ಅವರ "ನೆನಪಿನ ದೋಣಿ" ಕೃತಿಯಲ್ಲಿ ಕಾಣದ ಎಷ್ಟೋ ವಿವರಗಳು ಅವರ ಮಗಳು ತಾರಿಣಿಯವರು ಬರೆದ "ಮಗಳು ಕಂಡ ಕುವೆಂಪು" ಪುಸ್ತಕದಲ್ಲಿ ಲಭ್ಯವಿವೆ.

ಈ ಎಲ್ಲ ಹಿನ್ನೆಲೆಯಲ್ಲಿ, ಲಂಕೇಶರ ಪತ್ನಿ ಇಂದಿರಾ ಅವರು ಬರೆದ "ಹುಳಿಮಾವು ಮತ್ತು ನಾನು" ಕೃತಿ ನನ್ನ ಗಮನಕ್ಕೆ ಬಂದಾಗ ಅದನ್ನು ಸಾಕಷ್ಟು ಕುತೂಹಲ, ನಿರೀಕ್ಷೆಯಿಂದಲೇ ಕೈಗೆತ್ತಿಕೊಂಡಿದ್ದೆ. ಪುಸ್ತಕ ಓದಿ ಮುಗಿಸುವಾಗ ಅನಿಸುವುದೇನೆಂದರೆ ಇದು ಓದುವ ಮೊದಲು ನಾನು ಅಂದುಕೊಂಡಿದ್ದಂತೆ ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳ ಕುಟುಂಬದವರು ಆ ವ್ಯಕ್ತಿಯ ಕುರಿತು ಈಗಾಗಲೇ ಸಾರ್ವಜನಿಕವಾಗಿ ಪ್ರಚಲಿತವಿರುವ ಅಭಿಪ್ರಾಯಗಳಿಗೇ ಇಂಬು ಕೊಡುವ ದೈನಂದಿನ ವಿವರಗಳನ್ನು ಹಂಚಿಕೊಳ್ಳುವ ತರಹದ ಕೃತಿ ಅಲ್ಲ. ಇಂದಿರಾ ಲಂಕೇಶ್ ಅವರು ಲಂಕೇಶರ ಸಾಹಿತ್ಯ ಜೀವನದ  ಹೆಚ್ಚಿನ ವಿವರಗಳಿಗೆ ಹೋಗದೇ ತಮ್ಮಿಬ್ಬರ ದಾಂಪತ್ಯದ ವಿವರಗಳಿಗೇ ಕೃತಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ.  ಪತಿಯಾಗಿ ಅವರಲ್ಲಿ  ತಮಗೆ ಕಂಡು ಬಂದ ಗುಣಾವಗುಣಗಳನ್ನು ನಿರೂಪಿಸುತ್ತಾ ಹೋಗುತ್ತಾರೆ. ಹಾಗೆ ನೋಡಿದರೆ ದಾಂಪತ್ಯದ ಖಾಸಗಿ ವಿಚಾರಗಳು ಕೃತಿಯೊಂದರ ಮೂಲಕ ಈ ರೀತಿ ಸಾರ್ವಜನಿಕವಾಗಿ ಪ್ರಕಟಗೊಳ್ಳುವುದು ಅಪರೂಪವೇ. ಹೆಚ್ಚಿನ ಮಟ್ಟಿಗೆ ಇಂತಹ ಕೃತಿಗಳು ಮುಜುಗರ ಉಂಟು ಮಾಡಬಹುದಾದ ವೈಯಕ್ತಿಕ ವಿವರಗಳಿಗೆ ಹೋಗದೇ ನಿರಪಾಯಕಾರಿ ಚರ್ವಿತ ಚರ್ವಣಗಳಲ್ಲೇ ಸುತ್ತುವುದೇ ಹೆಚ್ಚು. ಈ ಕೃತಿಯಲ್ಲಿ ಲೇಖಕಿ ತಮ್ಮದೇ ಬದುಕಿನ ವಿವರಗಳ ಮೂಲಕ ಬದಲಾಗುತ್ತಿರುವ ಕಾಲಮಾನದ ಬದಲಾಗುತ್ತಿರುವ ಸಂಬಂಧಗಳತ್ತ ಗಮನ ಸೆಳೆಯುವುದು  ಸ್ವಾಗತಾರ್ಹ. ಇಲ್ಲಿ ಚಿತ್ರಣಗೊಂಡಿರುವ ಹಲವು ಸಂಗತಿಗಳು ಘಟಿಸಿ ದಶಕಗಳೇ ಕಳೆದಿದ್ದರೂ ಸಂಬಂಧವೊಂದರ ವ್ಯಾಖ್ಯಾನದ ದೃಷ್ಟಿಯಿಂದ ಅವು ಇಂದಿಗೂ ಪ್ರಸ್ತುತವೇ. 

ಅತ್ಯಂತ ಸರಳವಾದ ಭಾಷೆಯಲ್ಲಿ ದೈನಂದಿನ ಜೀವನದ ಸಾಮಾನ್ಯ ವಿವರಗಳಲ್ಲೇ ತಾವು ಸಾಗಿ ಬಂದ ಘಟ್ಟಗಳನ್ನು ಕಟ್ಟಿಕೊಡುತ್ತಾ  ಆ ಮೂಲಕ  ತಮ್ಮ ವೈವಾಹಿಕ ಜೀವನದ ಏರು ತಗ್ಗುಗಳನ್ನು ಉದ್ವೇಗವಿಲ್ಲದ ದನಿಯಲ್ಲಿ ವಿವರಿಸುತ್ತಾ ಸಾಗುವ ನಿರೂಪಣೆಯಿದೆ. ಆ ಬಗೆಯ ಸಂಯಮ ಬರವಣಿಗೆಯಲ್ಲಿ ಇರದಿದ್ದರೆ ಬರಹ ದೋಷಾರೋಪಣೆಯ ಸ್ವಾನುಕಂಪದ ಮಿತಿಯಲ್ಲೇ ಉಳಿದುಬಿಡಬಹುದಾದ ಸಾಧ್ಯತೆಯಿರುತ್ತಿತ್ತು. ಮಹಿಳೆಯೊಬ್ಬಳ ಸ್ವಾಭಿಮಾನದ, ಸ್ವಾವಲಂಬನೆಯ, ಧೈರ್ಯದ, ಜೀವನ ಪ್ರೀತಿಯ ಕಥನವಾಗಿಯೂ "ಹುಳಿಮಾವು ಮತ್ತು ನಾನು" ಗೆಲ್ಲುತ್ತದೆ. ಇದರ  ಸೋಲು ಅಥವಾ ಗೆಲುವಿಗೆ ಇದೇ  ಇದೇ  ಕಾರಣವೆಂದು ನಿರ್ಧರಿಸಿಬಿಡುವಷ್ಟು ಯಾವ ಸಂಬಂಧವೂ ಸರಳವಾಗಿರುವುದಿಲ್ಲ. ಅಥವಾ ಅದು ವ್ಯಕ್ತಿಗಳ ಪ್ರತಿಭೆ ಪ್ರಸಿದ್ಧಿಗಳ ಮೇಲೂ ಅವಲಂಬಿತವಾಗಿರುವುದಿಲ್ಲ. ಯಾವ ಸಂಬಂಧವೂ ಲೈಫ್ ಟೈಮ್ ವಾರಂಟಿಯನ್ನು ಪಡೆದೇನೂ ಬಂದಿರುವುದಿಲ್ಲ. ಅಡಿಗರು ಬರೆದಂತೆ- 

ಕೂಡಲಾರದೆದೆಗಳಲ್ಲು ಕಂಡೀತು ಏಕ ಸೂತ್ರ
ಕಂಡುದುಂಟು ಬೆಸೆದೆದೆಗಳಲ್ಲು ಭಿನ್ನತೆಯ ವಿಕಟ ಹಾಸ್ಯ

ಯಾವ ಕಾರಣಕ್ಕೋ  ಭಿನ್ನತೆಯು ಮೂಡಿದಾಗ ಪ್ರತಿಕ್ರಯಿಸುವ ಬಗೆ ನಿಜಕ್ಕೂ  ವ್ಯಕ್ತಿಯ ವ್ಯಕ್ತಿತ್ವವನ್ನೇ ನಿರ್ಧರಿಸುವ  ಪ್ರಶ್ನೆಯಾಗಿರುತ್ತದೆ. ಅರವತ್ತು ಎಪ್ಪತ್ತರ ದಶಕದಲ್ಲೇ ಅಂದಿನ ಸಾಮಾಜಿಕ ವಾತಾವರಣಕ್ಕೆ ಸವಾಲೆನ್ನುವಂತೆ  ತಮ್ಮ ಘನತೆಗೆ, ಅಭಿಮಾನಕ್ಕೆ ಯಾವುದೇ ಕುಂದು ತರದಂತೆ ತಮ್ಮದೇ ಸ್ವತಂತ್ರ ಅಸ್ತಿತ್ವದ ಅಸ್ಮಿತೆಯ ಸಾಧನೆಗೆ ಹೋರಾಡುವ  ಇಂದಿರಾ ಅವರ ಆಯ್ಕೆ ಗಮನಿಸಬೇಕಾದದ್ದು .  

ಇಷ್ಟೆಲ್ಲಾ ಆದಾಗಲೂ ತಮ್ಮ ಬರವಣಿಗೆಯುದ್ದಕ್ಕೂ ಎಲ್ಲಿಯೂ ತಮಗೆದುರಾದ ಸನ್ನಿವೇಶಗಳ ಕಾರಣಕ್ಕೆ ಲಂಕೇಶರ ವ್ಯಕ್ತಿತ್ವವನ್ನು ನೇರವಾಗಿ ಹೀಗಳೆಯುವಂತಹ ಪ್ರಸ್ತಾಪಗಳೇ ಇಲ್ಲ. ತಮಗಿಷ್ಟವಾಗದ ಅವರ ಗುಣಗಳ ಬಗೆಗೆ ಬರೆವಾಗಲೂ ಇಂದಿರಾ ಅವರಲ್ಲಿ ಅಂತರ್ಗಾಮಿಯಾದ ಒಂದು ಪ್ರೀತಿ, ಗೌರವ, ಸಹನೆ ಕಾಣಬರುತ್ತದೆ.  ಜೊತೆಗೇ ಉದ್ದಕ್ಕೂ ಜೀವನವನ್ನು ಧೈರ್ಯದಿಂದ ಉತ್ಸಾಹದಿಂದ ಛಲದಿಂದ ಎದುರಿಸಿದ ಒಬ್ಬ ಮಹಿಳೆಯ ಚಿತ್ರಣ ಕಾಣುತ್ತದೆ. ಲಂಕೇಶರಂತಹ ಪ್ರಖರ  ವ್ಯಕ್ತಿತ್ವದ ಮನುಷ್ಯನ ಮಡದಿಯಾಗಿಯೂ ತನ್ನ ವೈಯಕ್ತಿಕತೆಯನ್ನು ಸ್ವಲ್ಪವೂ ಬಿಟ್ಟುಕೊಡದೆ ತಾನೂ ಬಿಸಿನೆಸ್ಸ್ ನಡೆಸಿ, ತೋಟವನ್ನೂ ಮಾಡಿ ತಮ್ಮ ಆತ್ಮ ಗೌರವವನ್ನು ಕಾದುಕೊಳ್ಳುವುದು ಓದುಗರನ್ನು ತಟ್ಟದೆ ಇರದು. ಇವರ ಮೂವರು ಮಕ್ಕಳಾದ ಪತ್ರಕರ್ತೆ ಗೌರಿ, ಚಿತ್ರ ನಿರ್ದೇಶಕ ಇಂದ್ರಜಿತ್, ಹಾಗೂ ಚಿತ್ರ ನಿರ್ದೇಶಕಿ ಕವಿತಾ ರ ಬಗೆಗೂ ಕೃತಿಯುದ್ದಕ್ಕೂ ಕೆಲವು ವಿವರಗಳು ಕಾಣಸಿಗುತ್ತವೆ. 

ಲಂಕೇಶರ ಆತ್ಮಚರಿತ್ರೆ "ಹುಳಿಮಾವಿನ  ಮರ" ದಲ್ಲಿ ಅವರ ಕುಟುಂಬದ ವಿವರಗಳು ಅಷ್ಟಾಗಿ ಇಲ್ಲ. ಇನ್ನು ಅವರು ಸಂಪಾದಕರಾಗಿದ್ದಾಗ ಲಂಕೇಶ್ ಪತ್ರಿಕೆಯಲ್ಲಿ ಅಲ್ಲಲ್ಲಿ ಅವರ ಮಕ್ಕಳ ಬಗೆಗಿನ ಕೆಲ ವಿವರಗಳು ಪ್ರಸ್ತಾಪವಾಗುತ್ತಿದ್ದರೂ ಇಂದಿರಾ ಅವರ ಬಗೆಗೆ ಅವರು ಬರೆದಿದ್ದು ಬಹಳ ವಿರಳ. ಆದರೆ "ಹುಳಿಮಾವು ಮತ್ತು ನಾನು" ಕೃತಿಯಲ್ಲಿ  ಮೊದಲಿಂದ ಕಡೆಯವರೆಗೂ ಲಂಕೇಶರ ಉಪಸ್ಥಿತಿಯಿದೆ. ಹೀಗಾಗಿ ಲಂಕೇಶರ ಅಭಿಮಾನಿಗಳಿಗೆ ಅವರ ಜೀವನದ ವೈಯಕ್ತಿಕ ಮಗ್ಗುಲಿನ ಪರಿಚಯದ ದೃಷ್ಟಿಯಿಂದ ಈ ಕೃತಿ ಉಪಯುಕ್ತ. ಎಲ್ಲ ವಿವರಗಳೂ ಅವರ ವ್ಯಕ್ತಿತ್ವದ ಪ್ರಕಾಶವನ್ನು ಹೆಚ್ಚಿಸುವಂತವೇನೂ ಅಲ್ಲವಾಗಿದ್ದರೂ ಒಬ್ಬ ಅಪ್ರತಿಮ ಪತ್ರಕಾರನಾಗಿ, ಬರಹಗಾರನಾಗಿ ಕನ್ನಡ ಜಾಣ ಜಾಣೆಯರ ಹೃದಯದಲ್ಲಿ ಲಂಕೇಶ್ ಹೊಂದಿರುವ ಸ್ಥಾನಕ್ಕಂತೂ ಈ ಕೃತಿಯಿಂದ ಹಾನಿಯಾಗುವ ಸಾಧ್ಯತೆಗಳು ನನಗೆ ಕಾಣಿಸಲಿಲ್ಲ.  

No comments :