Wednesday, April 08, 2015

ಒಂದು ಬದಿ ಕಡಲು - ವಿವೇಕ್ ಶಾನಭಾಗ್



ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು

ಹೀಗೆ ಆರಂಭವಾಗುವ ದಿನಕರ ದೇಸಾಯಿಯವರ ಕರಾವಳಿ ಜಿಲ್ಲೆ ಉತ್ತರ ಕನ್ನಡದ ಬಗೆಗಿನ ಪದ್ಯದ ಸಾಲಿನಿಂದ ಪಡೆದ ಹೆಸರಿನ ಈ ಕಾದಂಬರಿಯಲ್ಲಿನ ಮುಖ್ಯ ಕಥನವು ಘಟಿಸುವುದು ಅದೇ ಕರಾವಳಿ ಜಿಲ್ಲೆಯಲ್ಲಿ.  ಯಶವಂತ ಚಿತ್ತಾಲರಿಂದ ಹಿಡಿದು ಈಚೆಗಿನ ಹಲವು ಬರಹಗಾರರ ಕೃತಿಗಳಲ್ಲಿ ಈ ಜಿಲ್ಲೆಯ ಬದುಕಿನ ಚಿತ್ರಣ ಪರಿಣಾಮಕಾರಿಯಾಗಿ ಮೂಡಿಬಂದಿರುವುದು ವಿಶೇಷ.

ಈಚಿನ ವರ್ಷಗಳಲ್ಲಿ ಕನ್ನಡದಲ್ಲಿ ಒಂದು ಪ್ರಜ್ಞಾವಂತ ಓದುಗ ವರ್ಗವನ್ನೆ ಗುರಿಯಾಗಿಸಿಕೊಂಡು ಏಳು ವರ್ಷಗಳ ಕಾಲ ಅತ್ಯುತ್ತಮವಾಗಿ ಹಾಗೂ ಅತ್ಯಂತ ಯಶಸ್ವಿಯಾಗಿ ಪ್ರಕಟಣೆ ಕಂಡ 'ದೇಶ ಕಾಲ' ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಪರಿಚಿತರಾಗಿದ್ದ ವಿವೇಕ್ ಶಾನಭಾಗ್ ಅವರ ಕಾದಂಬರಿ ಎಂದೊಡನೆ ಸಹಜವಾಗಿಯೇ ಕೃತಿಯ ಕುರಿತು ಕುತೂಹಲವಿತ್ತು. ಹೊಸ ಆರ್ಥಿಕ ವ್ಯವಸ್ಥೆ, ಮಾರುಕಟ್ಟೆ, ಜಾಗತೀಕರಣ, ನಗರೀಕರಣ ಇತ್ಯಾದಿಗಳು ದೈನಂದಿನ ಜೀವನದಲ್ಲಿ ತಂದೊಡ್ಡುವ ಸವಾಲುಗಳನ್ನೂ ಬದಲಾವಣೆಗಳನ್ನೂ ಸಮರ್ಥವಾಗಿ ಅಭಿವ್ಯಕ್ತಿಸಲು ದೇಶ ಕಾಲ ಒಂದು ಉತ್ತಮ ವೇದಿಕೆಯಾಗಿ ರೂಪುಗೊಂಡಿತ್ತು. ಹೊಸ ಸಾಹಿತ್ಯದ ಪ್ರಕಾಶನದ ಜೊತೆಗೇ ಈ ಪತ್ರಿಕೆಯು ವರ್ತಮಾನದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತಿದ್ದ ಬಗೆಯೂ ವಿಶಿಷ್ಟವಾಗಿರುತ್ತಿತ್ತು. ಅಂತಹದ್ದೊಂದು ಪತ್ರಿಕೆಯ ರೂವಾರಿಯಾಗಿದ್ದ ಲೇಖಕರು ತಮ್ಮ  'ಒಂದು ಬದಿ ಕಡಲು' ಕೃತಿಗೆ ನಗರದಿಂದ ದೂರದಲ್ಲಿರುವ ಚಿಕ್ಕದೊಂದು ಊರಿನ ಜೀವನದ  ಹಿನ್ನೆಲೆಯನ್ನು ಆರಿಸಿಕೊಂಡ ಬಗ್ಗೆಯೂ ಕುತೂಹಲವಿತ್ತು.

ಆಧುನಿಕ ತಂತ್ರಜ್ಞಾನ ಸಂಬಂಧದ ವೃತ್ತಿಗಳನ್ನು ಅವಲಂಬಿಸಿ ನಗರವಾಸಿಗಳಾಗಿರುವ  ನಮ್ಮಂತಹವರು ಈ ಸಮಕಾಲೀನ ತಂತ್ರಜ್ಞಾನ ತಂದು ಹೇರುವ ಒಂದು ನಿರ್ದಿಷ್ಟವೂ ಏಕರೂಪಿಯೂ ಆದ ಜೀವನ ಕ್ರಮಕ್ಕೆ ಪಕ್ಕಾಗಿರುತ್ತೇವೆ. ಎಷ್ಟರಮಟ್ಟಿಗೆಂದರೆ, ಕೆಲವೇ ವರುಷಗಳ ಹಿಂದೆ ನಮ್ಮ ಜೀವನದ ಭಾಗವೇ ಆಗಿದ್ದ ಹಳ್ಳಿ ಮತ್ತು ಕಿರುಪಟ್ಟಣಗಳ ಬದುಕು ಇಂದು ನಮಗೆ ಸಂಬಂಧವೇ ಪಡದ ಬೇರೊಂದು ಲೋಕ ಎಂದು ಅನಿಸುವಷ್ಟು.  ಆದರೆ ಸಾಹಿತ್ಯ ಎಂದರೆ ಎಲ್ಲ ಜೀವನ ಕ್ರಮಗಳ, ಎಲ್ಲ ಜನರ ಅನುಭವಗಳ ಅಭಿವ್ಯಕ್ತಿ.

'ಒಂದು ಬದಿ ಕಡಲು' ಪ್ರತಿನಿಧಿಸುವ ಜೀವನ ಕ್ರಮ ಸದ್ಯಕ್ಕೆ ನಮ್ಮದಲ್ಲದೆ ಇರಬಹುದು. ಇಲ್ಲಿನ ಪಾತ್ರಗಳ ಗೋಳುಗಳು, ಗೋಜಲುಗಳು ನಮಗೆ ಸಂಬಂಧವೇ ಪಡದಿರಬಹುದು. ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಇಲ್ಲಿನ ಪಾತ್ರಗಳು ಜೀವನ ತಂದು ಒಡ್ಡುವ ಸಮಸ್ಯೆಗಳಿಗೆ ಸಂಕಷ್ಟಗಳಿಗೆ ತಾಳ್ಮೆಯಿಂದ ಧೈರ್ಯದಿಂದ ನಿರುದ್ವಿಗ್ನತೆಯಿಂದ ಎದಿರಾಗುವ ಬಗೆ. ಅದರಲ್ಲೊಂದು ಪಾಠವಿದೆ. ಆ ದೃಷ್ಟಿಯಿಂದ ಎಲ್ಲ ಉತ್ತಮ ಕೃತಿಗಳಿಗೂ ಒಂದು ಪ್ರಸ್ತುತತೆಯಿರುತ್ತದೆ.

ಇಪ್ಪತ್ತರ ವಯಸ್ಸಿಗೇ ವಿಧವೆಯರಾದರೂ ಧೈರ್ಯಗೆಡದೆ ಆತ್ಮವಿಶ್ವಾಸದಿಂದ ಜೀವನ ಸಾಗಿಸುವ ಅತ್ತೆ-ಸೊಸೆ ಪಂಢರಿ ಮತ್ತು ಯಮುನಾ, ಅನಾಥೆಯಾದ ತನ್ನ ತಂಗಿಯ ಮಗಳು ಸುನಂದೆಯನ್ನು ಕರೆತಂದು ಸಾಕಿ, ಮುಂದೆ ತನ್ನೆಲ್ಲ ಚಾಣಾಕ್ಷತೆಯನ್ನುಪಯೋಗಿಸಿ ಉತ್ತಮ ವರನಾದ ಪುರಂದರನ ಜತೆ ಅವಳ ವಿವಾಹವನ್ನೂ ಮಾಡುವ 'ಜೀರಿ ಮೆಣಸು' ಗೋದಾವರಿ, ನಾಟಕದ ಖಯಾಲಿಗೆ ಬಿದ್ದ ಯಶವಂತ, ಸಮಾಜದ ಕಟ್ಟುಪಾಡನ್ನು ಮೀರುವ ಧೈರ್ಯ ತೋರುವ ರಮಾಕಾಂತ ಮಾಸ್ತರ, ಹೀಗೇ ಹಲವು ಪಾತ್ರಗಳು ನೆನಪಲ್ಲುಳಿಯುತ್ತವೆ.

ಉತ್ತರ ಕನ್ನಡದ ಜನರು ತಮ್ಮ ಎಂದಿನ ಧಾವಂತವಿಲ್ಲದ ಸಾವಧಾನದ ಬದುಕಿನಲ್ಲಿ ಅನಿವಾರ್ಯವಾಗಿ ಎದುರಾಗುವ ಸನ್ನಿವೇಶಗಳನ್ನು ನಿರ್ವಿಕಾರವಾಗಿ ನಿಭಾಯಿಸುವುದರ ಚಿತ್ರಣ ಕೃತಿಯಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.