Tuesday, March 25, 2014

ಮರೆಯಾದ ಮೇಧಾವಿ - ಯಶವಂತ ಚಿತ್ತಾಲ

 "ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದ ಹಾಗೆ..."  ಚಿತ್ತಾಲರ 'ಶಿಕಾರಿ' ಕಾದಂಬರಿಯ ಆರಂಭದ ಸಾಲು ಇದು.

ಮೊನ್ನೆ ಭಾನುವಾರ, ಬೆಳಗಿನ ದಿನಪತ್ರಿಕೆಯಲ್ಲಿ 'ಹಿರಿಯ ಸಾಹಿತಿ ಚಿತ್ತಾಲ ಇನ್ನಿಲ್ಲ' ಎಂಬ ತಲೆಬರಹದ ವರದಿಯನ್ನು ಓದಿದಾಗಿನಿಂದ ನನ್ನ ಮನಸ್ಸಿನ ಸ್ಥಿತಿಯೂ ಮೇಲಿನ ಸಾಲಿನಂತೆ ಇದೆ.

ಸಾಹಿತಿಯಾಗಿ, ಅದರಲ್ಲೂ ಕಾದಂಬರಿಕಾರರಾಗಿ ನಾನು ಬಹಳವಾಗಿ ಮೆಚ್ಚಿಕೊಂಡವರು ಯಶವಂತ ಚಿತ್ತಾಲ. ಹಿಂದೊಮ್ಮೆ 'ನಾನೇಕೆ ಬರೆಯುತ್ತೇನೆ?' ಎಂಬ ತಮ್ಮದೊಂದು  ಲೇಖನದಲ್ಲಿ 'ನೀವೇಕೆ ಬರೆಯುತ್ತೀರಾ?' ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ- "ನನ್ನ ಹುಟ್ಟನ್ನು, ಅಸ್ತಿತ್ವವನ್ನು ಅಲ್ಲಗಳೆಯುವಷ್ಟರ ಮಟ್ಟಿಗೆ ಅವುಗಳಿಗೆ ನಿರಾಸಕ್ತವಾದ ಈ ವಿಶಾಲ ವಿಶ್ವಕ್ರಮದಲ್ಲಿ, ಅಮೂರ್ತವಾದ ಸಮಾಜದಲ್ಲಿ ನನ್ನ ವೈಯಕ್ತಿಕ ಇರವಿನ ಪ್ರಸ್ತುತತೆಯನ್ನು ಕಂಡುಕೊಳ್ಳುವ ಹಾಗೂ ಆ ಮೂಲಕ ನನ್ನ ಸಮಾಜವನ್ನು, ಈ ವಿಶ್ವವನ್ನು ನನಗೆ ಜೀವಂತವಾಗಿಸುವ, ಅರ್ಥಪೂರ್ಣವಾಗಿಸುವ ಕ್ರಿಯೆಯಲ್ಲಿ ನನ್ನ ಸೃಷ್ಟಿ ಕಾರ್ಯ ಮಹತ್ವಪೂರ್ಣವಾದ ಭಾಗವಹಿಸಿದೆ."

ತಮ್ಮದೇ ಆದ ಭಾವ ಪ್ರಪಂಚ, ವೈಚಾರಿಕ ಪ್ರಪಂಚಗಳನ್ನು ಹೊಂದಿದ್ದ ಚಿತ್ತಾಲರು ತಮ್ಮ ಪ್ರತಿಯೊಂದು ಕೃತಿಯಲ್ಲೂ ಪಾತ್ರಗಳ ಮೂಲಕ ತಮ್ಮ ವೈಯಕ್ತಿಕ ಪ್ರಸ್ತುತತೆಯ ಹುಡುಕಾಟವನ್ನು ನಡೆಸಿದರು. ಬೌದ್ಧಿಕ ಹಾಗೂ ತಾತ್ತ್ವಿಕ ಒಳನೋಟಗಳನ್ನು ತಮ್ಮ ಕೃತಿಗಳಲ್ಲಿ ಕತೆಯ ಚೌಕಟ್ಟಿನಲ್ಲೇ ಮೂಡಿಸುವ ಅದ್ಭುತ ಕಲೆಗಾರಿಕೆ ಅವರ ಬರವಣಿಗೆಯಲ್ಲಿತ್ತು.

ಶಿಕಾರಿ ನನಗೆ ಬಹಳ ಇಷ್ಟವಾದ ಕಾದಂಬರಿ. ಕಾರ್ಪೊರೇಟ್ ಜಗತ್ತಿನ ವ್ಯಕ್ತಿಯೊಬ್ಬ ತನ್ನ ವೃತ್ತಿ ಸಂಬಂಧಿತ ವಿಚಾರವಾಗಿ ಒಂದು ಆಘಾತ ಎದುರಾದಾಗ, ತನ್ನ ಅಂತರಂಗದ, ತನ್ನ ಅನುಭವಗಳ, ತನ್ನ ಇಡೀ ವ್ಯಕ್ತಿತ್ವದ ಸ್ವಯಂಪರೀಕ್ಷೆಗೆ ಇಳಿಯುತ್ತಾನೆ. ಹೀಗೆ ಮಾಡಿದ ಮೇಲೆ ಹೊಸದೇ ಒಂದು ವ್ಯಕ್ತಿತ್ವನ್ನು ಪಡೆದುಕೊಳ್ಳುವ ತೀರ್ಮಾನಕ್ಕೆ ಬರುತ್ತಾನೆ. ಇದಿಷ್ಟು ಕತೆಯ ಮೂಲ ಸಾರ. ಆದರೆ ಈ ಕೃತಿಯ ಕುರಿತು ಅಷ್ಟೇ ಹೇಳಿದರೆ ಬಹುಶಃ ಸಾಲದು.

ಎಲ್ಲ ಮುಖ್ಯ ಸಾಹಿತಿಗಳ ಕೃತಿಗಳಲ್ಲಿ ಸ್ವಾರಸ್ಯ ಕೇವಲ ಕತೆಯ ಕುತೂಹಲದಲ್ಲಿ ಇರುವುದಿಲ್ಲ. ದೊಸ್ತೋವಸ್ಕಿಯ 'ಕ್ರೈಮ್ ಅಂಡ್ ಪನಿಶ್ಮೆಂಟ್' ಕೃತಿ ಓದುವಾಗಲೂ ಇದೇ ಭಾವನೆ ಬಂದದ್ದು ನೆನಪಾಗುತ್ತಿದೆ. ಶ್ರೇಷ್ಠ ಕೃತಿಗಳಲ್ಲಿ ಕೆಲವೊಮ್ಮೆ ಕತೆಯೇ ನಿಮಿತ್ತ ಮಾತ್ರವಾಗಿಬಿಡುತ್ತದೆ. ಲೇಖಕರ ಅನುಭವ, ಜೀವನದೃಷ್ಟಿ, ವಿನೋದಶೀಲತೆ, ವೈಚಾರಿಕತೆ, ವ್ಯಕ್ತಿ ಮತ್ತು ಸಮಾಜದ ಸಂಬಂಧದ ವಿಶ್ಲೇಷಣೆ, ಕ್ರಿಯೆಗಳ ಹಿಂದಿನ ಪ್ರೇರಣೆಗಳ ಹುಡುಕಾಟ, ಹೀಗೇ ಎಲ್ಲವೂ ಕೃತಿಯ ಶಿಲ್ಪದಲ್ಲೇ ಮಿಳಿತಗೊಂಡಿರುತ್ತವಾದ್ದರಿಂದ ಕೃತಿಯೊಂದು ಮೊಗೆದಷ್ಟೂ ಬತ್ತದ ಜೀವ ಸೆಲೆಯಾಗಿಬಿಡುತ್ತದೆ.

ಚಿತ್ತಾಲರು ೧೯೬೪ ರಷ್ಟು ಹಿಂದೆಯೇ, ತಮ್ಮಮೂವತ್ತಾರನೇ ವಯಸ್ಸಿಗೇ ಬರೆದ ಮೊದಲ ಕಾದಂಬರಿ 'ಮೂರು ದಾರಿಗಳು'. ಇದು ಸಹ ನನ್ನನ್ನು ಬಹುವಾಗಿ ಕಾಡಿದ ಕಾದಂಬರಿ. ಮುನ್ನುಡಿಯಲ್ಲಿ ಲೇಖಕರೇ  ಈ ಕಾದಂಬರಿಯನ್ನು ಪರಿಚಯಿಸುವುದು ಹೀಗೆ- "ಉದ್ಭವಿಸಿದ ಒಂದು ಪ್ರಶ್ನೆಯನ್ನು ಬಿಡಿಸಲು ಮೂರು  ವ್ಯಕ್ತಿಗಳು ಕಂಡುಕೊಂಡ ದಾರಿಗಳು: ಇವು ಇವರು ಬದುಕನ್ನು ಇದಿರಿಸುವ ರೀತಿಗಳೂ ಹೌದು. ಭೀತಿ, ಪ್ರೀತಿ, ಬಂಡಾಯ (ಆತ್ಮ ನಾಶ) ಇವುಗಳ ಸೆಲೆ ಇವರ ವ್ಯಕ್ತಿತ್ವದಲ್ಲಿ. ಇವರು ಬೆಳೆದ ಪರಿಸರದ ಮಹತ್ವ  ಇವರ ವ್ಯಕ್ತಿತ್ವ ರೂಪುಗೊಂಡ ರೀತಿಯನ್ನು ತಿಳಿಯುವಷ್ಟರ ಮಟ್ಟಿಗೆ ಮಾತ್ರ..."

ಹಳ್ಳಿಯಲ್ಲಿದ್ದ ತಂದೆ ಹತ್ತಿರದ ನಗರವೊಂದರಲ್ಲಿ ಸಂಬಂಧಿಕರ ಮನೆಯಲ್ಲಿ ಮಗಳನ್ನು ಓದುವ ಸಲುವಾಗಿ ಬಿಟ್ಟಿರುತ್ತಾರೆ. ಅದೇ ಊರಿನಲ್ಲಿ ಫೋಟೋ ಸ್ಟುಡಿಯೋ ಒಂದರ ಯುವಕನೊಬ್ಬನ ಬಗ್ಗೆ ಲಫಂಗನೆಂಬ ಅಭಿಪ್ರಾಯ ಜನರಲ್ಲಿರುತ್ತದೆ. ಈ ಯುವಕನೊಡನೆ ಒಂದು ಸಂಜೆ ಈ ಹುಡುಗಿ ಒಬ್ಬಳೇ ಇದ್ದಳೆಂಬ ಸುದ್ದಿಯಿಂದ ಗಾಬರಿಗೊಂಡ ಅವಳ ತಂದೆ ಅವಸರದಲ್ಲಿ ಮೊದಲೇ ಪರಿಚಯವಿರುವ ಸಭ್ಯ ಹುಡುಗನೊಬ್ಬನೊಡನೆ ಅವಳ ಮದುವೆಯ  ಏರ್ಪಾಡಿಗೆ ಮುಂದಾಗುತ್ತಾರೆ. ಇದರಿಂದ ಕನಲಿದ ಹುಡುಗಿ ಬಂಡಾಯವೇಳುತ್ತಾಳೆ. ಅವಳ ಆತ್ಮಹತ್ಯೆಯ ದುರಂತದಲ್ಲಿ ಕತೆ ಮುಗಿಯುತ್ತದೆ. ಇದಿಷ್ಟು ಕತೆ.

ಈ ಮೊದಲೇ ನಾನು ಹೇಳಿದಂತೆ ಚಿತ್ತಾಲರಂತಹ ಕೃತಿಕಾರರ ಲೇಖನಿಯಲ್ಲಿ ಕೃತಿಯು ಸರಳವಾದ ಮೂಲ ಕತೆಯನ್ನು ಅನಾಯಾಸವಾಗಿ ಮೀರುತ್ತ  ಓದುಗರ ಮನದ ಆವರಣದಲ್ಲಿ ವಿಸ್ತೃತಗೊಳ್ಳುತ್ತಾ ಹೋಗುತ್ತದೆ. 'ಮೂರು ದಾರಿಗಳು' ಕೃತಿಯಲ್ಲಿ ನನ್ನನ್ನು ಎಲ್ಲಕ್ಕಿಂತ ಪ್ರಕ್ಷುಬ್ಧಗೊಳಿಸಿದ್ದೆಂದರೆ ರೂಢಿಗತ ಶಿಷ್ಟತೆಯ ಹೆಸರಲ್ಲಿ ಮುಗ್ಧ ನಿಷ್ಪಾಪ ಜೀವಗಳ ಜೀವನದ ಮೇಲೆ ಅನಪೇಕ್ಷಿತ, ಅಸಹ್ಯಕರ ಆಕ್ರಮಣ ಮಾಡುವ  ಸುತ್ತಲಿನ ಜನ. ಬೇಡದ ಉಸಾಬರಿಯಲ್ಲೇ ಜೀವನವಿಡೀ ಕಳೆಯುವ ಇಂತಹವರು ಎಲ್ಲೆಲ್ಲೂ ಕಾಣುತ್ತಾರೆ.  ಇಲ್ಲಿ ನಡೆಯುವುದೂ ಅಂತಹುದೇ. ಹರಯದ ವಯಸ್ಸಲ್ಲಿ ಕಾಮ ಅನಾವರಣಗೊಳ್ಳುವ ರೀತಿ, ಅದಕ್ಕೆ 'ಮರ್ಯಾದಸ್ತ' ಸಂಬಂಧಿಗಳು, ಅನಗತ್ಯ ಕುತೂಹಲ ಕುಹಕಗಳ ನೆರೆಹೊರೆಯವರು ಪ್ರತಿಕ್ರಯಿಸುವ ರೀತಿ, ಅದರಿಂದಾಗುವ ಸಮಸ್ಯೆ, ದುರಂತ... ನಿರ್ಮಲೆಯ ಕುರಿತು ತಡೆಯಿಲ್ಲದಂತೆ ಸುದ್ದಿಯನ್ನು ಹರಡಿ ಅವಘಡಕ್ಕೆ ಹಲವು ಮಂದಿ ಕಾರಣರಾಗುತ್ತಾರಾದರೂ, ಅಂತಹದ್ದೊಂದು ಸನ್ನಿವೇಶ ಏರ್ಪಡಲು ಅಂದಿನ ಅಲ್ಲಿನ ರೂಢಿಗತ ಸಾಂಸ್ಕೃತಿಕ ಸಾಮಾಜಿಕ ಸನ್ನಿವೇಶ ಹೇಗೆ ಕಾರಣವಾಗುತ್ತದೆ ಎನ್ನುವುದೂ ನಮ್ಮನ್ನು ಯೋಚನೆಗೆ ಹಚ್ಚಬೇಕಾದ ವಿಚಾರವಾಗುತ್ತದೆ.

ಇಂತಹ ಪ್ರಶ್ನೆಗಳನ್ನು ಓದುಗರಲ್ಲಿ ಎತ್ತುತ್ತಾ, ವ್ಯಕ್ತಿ ಹಾಗೂ ಸಮಾಜದ ಘರ್ಷಣೆಯನ್ನು ಚಿತ್ರಿಸುವುದರೊಂದಿಗೇ, ಕೃತಿಯ ಮುಖ್ಯ ಪಾತ್ರಗಳು ಅನುಭವಿಸುವ ವೈಯಕ್ತಿಕ ಮಾನಸಿಕ ಸಂಘರ್ಷವನ್ನೂ ಚಿತ್ತಾಲರು ಚಿತ್ರಿಸುತ್ತಿದ್ದ ಬಗೆ ಅನನ್ಯ.

ಛೇದ, ಪುರುಷೋತ್ತಮ, ಕೇಂದ್ರ ವೃತ್ತಾಂತ ಇವು ಇವರ ಇನ್ನುಳಿದ ಕಾದಂಬರಿಗಳು. ಪುರುಷೋತ್ತಮ  ನಾನಿನ್ನೂ ಓದದೇ ಇರುವ ಕೃತಿ. ೧೯೯೫ ರಲ್ಲಿ 'ಕೇಂದ್ರ ವೃತ್ತಾಂತ ' ಪ್ರಕಟಗೊಂಡ ಮೇಲೆ ಚಿತ್ತಾಲರ ಮತ್ತಾವುದೇ ಕಾದಂಬರಿ ಪ್ರಕಟವಾಗಲಿಲ್ಲ. 'ದಿಗಂಬರ' ಎಂಬ ಹೆಸರಿನ ಹೊಸ ಕಾದಂಬರಿಯ ರಚನೆಯಲ್ಲಿ ತೊಡಗಿದ್ದರೆಂಬ ಸುದ್ದಿಯೇನೋ ಇತ್ತು. ಆ ಕಾದಂಬರಿಯ ಪ್ರಕಟಣೆಗೆ ಎದಿರು ನೋಡುತ್ತಿದ್ದವರಲ್ಲಿ ನಾನೂ ಒಬ್ಬ. ಆ ಕಾದಂಬರಿ ಪ್ರಕಟವಾಗುವುದರೊಳಗೇ ಸೂಕ್ಷ್ಮ ಸಂವೇದನೆಯ ಈ ಲೇಖಕ ಲೋಕದ ವ್ಯವಹಾರ ಮುಗಿಸಿ ನಡೆದದ್ದು ವಿಷಾದದ ಸಂಗತಿ.

ನನಗೆ ಆಶ್ಚರ್ಯವಾಗುವುದೇನೆಂದರೆ ಚಿತ್ತದಾಳದ ಶೋಧನೆಯ ಈ 'ಯಶವಂತ' ಕನ್ನಡ ಓದುಗ ಬಳಗದಲ್ಲೇಕೋ ಹೆಚ್ಚಿನ ಯಶವನ್ನು ಕಾಣದೆ ಹೋದದ್ದು. ದೂರದ ಮುಂಬಯಿಯಲ್ಲಿದ್ದು ಭೌತಿಕವಾಗಿ ಕನ್ನಡಿಗರಿಂದ ಸದಾ ದೂರವಿದ್ದದ್ದಕ್ಕೋ, ಸ್ವಲ್ಪ ಬೇರೆಯದಾದ ಉತ್ತರ ಕನ್ನಡದ ನುಡಿಕಟ್ಟಿನ ಬಳಕೆಯ ಕಾರಣಕ್ಕೋ, ಅಥವಾ ಗಿರೀಶ್ ಕಾರ್ನಾಡರು ಇತ್ತೀಚಿಗೆ ವಿಶೇಷಾಂಕವೊಂದರಲ್ಲಿ ನಮ್ಮ ಇತರ ಮುಖ್ಯ ಸಾಹಿತಿಗಳೊಡನೆ ಸಂವಾದದಲ್ಲಿ ಹೇಳಿದಂತೆ 'ಜ್ಞಾನಪೀಠ' ಪ್ರಶಸ್ತಿ ಬಂದವರಷ್ಟೇ ಶ್ರೇಷ್ಟರು ಎಂಬ ಭಾವನೆ ಹಲವು ಕನ್ನಡಿಗರಲ್ಲಿ ಇರಬಹುದಾದ ಕಾರಣಕ್ಕೋ ತಿಳಿಯುವುದಿಲ್ಲ.

ವಿಜ್ಞಾನ ವಿದ್ಯಾರ್ಥಿಯಾಗಿದ್ದೂ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಈ  ಮೇಧಾವಿ, ಮಾನವತಾವಾದಿ, ಚಿಕಿತ್ಸಕ ದೃಷ್ಟಿಯ ಚಿಂತಕ, ಕುಶಲ ಕಲೆಗಾರಿಕೆಯ ಕತೆಗಾರ ಕನ್ನಡ ಸಾಹಿತ್ಯದ ಸಾಧ್ಯತೆಗಳನ್ನು ವಿಸ್ತರಿಸಿದ್ದಂತೂ ಎಲ್ಲರೂ ಒಪ್ಪಬೇಕಾದ ವಿಚಾರ.  ನಮ್ಮ ಸಾಹಿತ್ಯದಲ್ಲಿ ಅಷ್ಟೇನೂ ಹೆಚ್ಚಾಗಿ ಕಂಡುಬರದ ನಗರ ಜೀವನದ ತಲ್ಲಣಗಳ  ಚಿತ್ರಣವನ್ನು ತಮ್ಮ ಕೃತಿಗಳಲ್ಲಿ ನೀಡುತ್ತ ಬಂದ, ಹೊಸ ವಿಚಾರಗಳಿಗೆ ಸದಾ ತೆರೆದುಕೊಂಡಿದ್ದ, ಯಾಂತ್ರೀಕರಣಗೊಳ್ಳುತ್ತಲೇ ಸಾಗಿರುವ ಆಧುನಿಕ ಯುಗದಲ್ಲಿ ಸಂಬಂಧಗಳ ಪ್ರಸ್ತುತತೆಯ ಹುಡುಕಾಟ ನಡೆಸಿದ ಪ್ರೀತಿಯ ಜೀವವೊಂದು ಕಣ್ಮರೆಯಾಗಿದೆ.

೧೯೭೬ ರಲ್ಲಿ ತಮ್ಮ 'ನಾನೇಕೆ ಬರೆಯುತ್ತೇನೆ?' ಲೇಖನದಲ್ಲಿ ಚಿತ್ತಾಲರು ತಮ್ಮ ಸಾಹಿತ್ಯಿಕ ನಂಬಿಕೆಗಳ ಬಗ್ಗೆ  ಹೀಗೆ ಬರೆದಿದ್ದರು- "ಇತಿಹಾಸದಲ್ಲಿ ಹೆಸರನ್ನು ಬಿಟ್ಟು ಹೋಗುವ ದುಷ್ಟ ಅವಸರದಲ್ಲಿ ಬರಿಯೆ ಸತ್ತೆಯ ಬಲವೊಂದರ ಮೇಲಿಂದಲೇ ತಮ್ಮ ಕನಸುಗಳನ್ನು ಉಳಿದವರ ಮೇಲೆ ಹೇರಬೇಕೆನ್ನುವ; ಸಾವಿಗೆ ಹೆದರಿ ಸಾವನ್ನೇ ಬಿತ್ತುವ ರಾಜಕಾರಣಿಯ ಅಹಂಕಾರಕ್ಕಿಂತ, ಸೃಷ್ಟಿಸುವುದರ ಮೂಲಕವೇ  ಭೌತಿಕ, ಐತಿಹಾಸಿಕ, ಸಾಮಾಜಿಕ ನಿರ್ಬಂಧನೆಗಳಿಂದ ಅನಿರ್ಬಂಧನಾಗುತ್ತ; ತನ್ನ ಪ್ರೀತಿಯಿಂದ ಸಾವನ್ನು ಗೆಲ್ಲುತ್ತ ನಿರಹಂಕಾರಿಯಾದ ಸಾಹಿತಿಯ ಸತ್ಯದ ಹುಡುಕಾಟ ನನಗೆ ತುಂಬ ಪ್ರಿಯವಾದದ್ದು." ಇದೇ ಲೇಖನದಲ್ಲಿ ಇನ್ನೊಂದೆಡೆ ಹೇಳುತ್ತಾರೆ- "...ನಾನು ಬರೆಯುತ್ತಿದ್ದದ್ದು ನಾನು ನಾನೇ  ಆಗಲು. ನಾನು ನಾನಾಗಿಯೇ ಉಳಿದು ಉಳಿದವರೊಂದಿಗೆ ಬೆರೆಯಲು, ಪ್ರೀತಿಸಲು, ಪ್ರೀತಿಸುವುದನ್ನು ಕಲಿಯಲು. ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಿಕೊಳ್ಳಲು. ಉಳಿದವರನ್ನು ತಿದ್ದುವುದಕ್ಕಲ್ಲ - ಆ ಯೋಗ್ಯತೆಯಾಗಲೀ ಅಧಿಕಾರವಾಗಲೀ ನನಗಿಲ್ಲ."

ಯಶವಂತರ ಸೋದರ, ಪ್ರತಿಭಾವಂತ ಕವಿ  ಗಂಗಾಧರ  ಚಿತ್ತಾಲರ 'ಹರಿವ ನೀರಿದು' ಕವನದ  ಸಾಲುಗಳು "ನಶ್ವರತೆಯನ್ನೇ ಫಲಿಸುತ್ತ ಶಾಶ್ವತವನ್ನು ನಿಲ್ಲಿಸುವ" ಮನುಷ್ಯನ ಪ್ರಯತ್ನ, ಅಂತಹದ್ದೊಂದು ಕ್ರಿಯೆಯಲ್ಲೇ ಅಡಗಿರುವ ದ್ವಂದ್ವದ ಬಗೆಗೆ  ಸೂಚಿಸುತ್ತವೆ. ಹಾಗೆಯೇ "ಎಚ್ಚತ್ತು ನಿಲ್ಲುವ"  ಸುಖವನ್ನೂ ನೆನಪಿಸುತ್ತವೆ.  ತಾವು "ಎಚ್ಚತ್ತುಕೊಳ್ಳಲು" ಹಾಗೆಯೇ ನಮ್ಮನ್ನೂ ಎಚ್ಚರಿಸಲು ತಮ್ಮ ಬರವಣಿಗೆಯನ್ನು ಬಳಸಿದ ಯಶವಂತರನ್ನೊಮ್ಮೆ  ನೆನೆಯುತ್ತ ಕವನದ ಸಾಲುಗಳನ್ನು ನೋಡೋಣ-

"ಇಲ್ಲಿ
ಕಾಲಾತೀತದಲ್ಲಿ
ಕಾಲಾಧೀನರಾಗಿ ಚರಿಸುವುದೊಂದೆ
ಬೆರಗಿನರ್ಭಕ ದೃಷ್ಟಿ ಬಾಚಿ ಅಭ್ಯಾಗತರ ತೆರದಿ ನೆಲಸುವುದೊಂದೆ
ನಶ್ವರತೆಯನೆ ಫಲಿಸಿ ಕುಡಿಯೊಡೆಯ  ಬಿಟ್ಟು
ಶಾಶ್ವತಿಯ ನಿಲಿಸುವುದೊಂದೆ.
ಈ ಮಹಾದ್ಭುತದಿ ಉದ್ಭವಿಸಿ ಬಂದಿಹೆವಲ್ಲ
ಅದೆ ಒಂದು ಹಿಗ್ಗು, ಎಚ್ಚತ್ತು ನಿಂತಿಹೆವಲ್ಲ
ಅದೆ ಒಂದು ನೆತ್ತರಲಿ ದಿನ ರಾತ್ರಿ ಹರಿವ ಸುಖ."