Friday, July 28, 2017

"ಫೋರ್ ಲೆಗ್ಸ್ ಗುಡ್, ಟೂ ಲೆಗ್ಸ್ ಬ್ಯಾಡ್"

ಮೊನ್ನೆ ತಾನೇ ಹುದ್ದೆಯಿಂದ ನಿವೃತ್ತರಾದ ನಮ್ಮ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಒಂದೆರಡು ವಿಚಾರಗಳು ದೇಶದ ನಾಗರಿಕರನ್ನು ಆತ್ಮ ನಿರೀಕ್ಷಣೆಗೆ ಹಚ್ಚುವಂತಿದ್ದವು. ಅವರ ಮಾತುಗಳು ಹೀಗೆ ಸಾಗಿದ್ದವು-

"ಭಾರತದ ಆತ್ಮ ಇರುವುದೇ ಬಹುತ್ವ ಮತ್ತು ಸಹಿಷ್ಣುತೆಗಳಲ್ಲಿ. ಭಾರತವು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ. ಅದರಲ್ಲಿ   ಹಲವು ವಿಚಾರಗಳ ಇತಿಹಾಸ, ತತ್ತ್ವಶಾಸ್ತ್ರ, ಬೌದ್ಧಿಕತೆ, ಕೈಗಾರಿಕಾ ಕುಶಲಕಲೆ, ನವೋನ್ವೇಷಣೆ ಮತ್ತು ಅನುಭವಗಳು ಸಮ್ಮಿಳಿತವಾಗಿವೆ. ನಮ್ಮ ಸಮಾಜದ ಬಹುತ್ವ ನಿರ್ಮಾಣವಾಗಿರುವುದು  ಶತಮಾನಗಳ ಕಾಲದ ಹಲವಾರು ವಿಚಾರಗಳ ಸಮ್ಮಿತಗೊಂಡಿರುವದರಿಂದ. ಸಂಸ್ಕೃತಿ, ಮತ ಮತ್ತು ಭಾಷೆಗಳ ವೈವಿಧ್ಯತೆಗಳೇ ಭಾರತವನ್ನು ವಿಶೇಷವಾಗಿಸುವ ಅಂಶಗಳು. ಶತಮಾನಗಳ ಕಾಲ ಇದು ನಮ್ಮ ಸಮಷ್ಟಿ ಪ್ರಜ್ಞೆಯ ಭಾಗವಾಗಿರುವಂತಹದ್ದು. ನಮ್ಮ ಸಾರ್ವಜನಿಕ ಸಂವಾದದಲ್ಲಿ ಹಲವಾರು ಭಿನ್ನ ಎಳೆಗಳಿವೆ. ನಾವು ವಾದಿಸಬಹುದು. ಒಪ್ಪಬಹುದು, ಒಪ್ಪದೇ ಇರಬಹುದು. ಆದರೆ ಈ ವಿವಿಧ ಅಭಿಪ್ರಾಯಗಳ ಇರುವಿಕೆಯನ್ನು ನಾವು ಅಲ್ಲಗಳೆಯಲಾಗದು. ಹಾಗೇನಾದರೂ ಮಾಡಿದರೆ ನಮ್ಮ ಆಲೋಚನಾ ರೀತಿಯ ಒಂದು ಮೂಲಭೂತ ಗುಣವೇ ಕರಗಿಹೋಗುವುದು."

"ಕರುಣೆ ಮತ್ತು ಅನುಕಂಪ ನಮ್ಮ ನಾಗರಿಕತೆಯ ನಿಜವಾದ ಅಡಿಗಲ್ಲು. ಆದರೆ ನಿತ್ಯವೂ ನಮ್ಮ ಸುತ್ತ ಮುತ್ತ ಹಿಂಸೆ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ.  ಈ ಹಿಂಸೆಯ ಕೇಂದ್ರದಲ್ಲಿರುವುದು ನಮ್ಮಲ್ಲಿರುವ ಅಂಧಃಕಾರ, ಭಯ ಮತ್ತು ಅಪನಂಬಿಕೆ. ನಾವು ನಮ್ಮ ಸಾರ್ವಜನಿಕ ವಿಚಾರ ವಿನಿಮಯವನ್ನು ಎಲ್ಲ ಬಗೆಯ ಹಿಂಸೆಯಿಂದ ಮುಕ್ತಗೊಳಿಸಬೇಕು. ಅಹಿಂಸಾತ್ಮಕ ಸಮಾಜದಲ್ಲಿ ಮಾತ್ರ ಎಲ್ಲ ವರ್ಗದ ಜನರ ಒಳಗೊಳ್ಳುವಿಕೆ ಸಾಧ್ಯ. ಅದರಲ್ಲೂ ಅಂಚಿನಲ್ಲಿರುವವರನ್ನು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಯಿಂದ ಹೊರಗಿರುವವರನ್ನು ಒಳಗೊಳ್ಳಬೇಕು. ಅಹಿಂಸೆಯ ಶಕ್ತಿಯನ್ನು ಮರಳಿ ಸ್ಥಾಪಿಸುವ ಮೂಲಕವೇ ಅನುಕಂಪ ಮತ್ತು ಕಾಳಜಿಯನ್ನುಳ್ಳ ಸಮಾಜವನ್ನು ಕಟ್ಟಬೇಕು."

ಮಾಜಿ ರಾಷ್ಟ್ರಪತಿಯವರ ಈ ಮಾತುಗಳನ್ನು ಕೇಳುವಾಗ ದೇಶದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಬಿ ಆರ್. ಅಂಬೇಡ್ಕರ್ ಅವರ  ಭಾಷಣವೊಂದು ನೆನಪಿಗೆ ಬಂತು.

೧೯೪೮ರಲ್ಲಿ ಸಂವಿಧಾನ ರಚನಾ ಸಭೆಯ ಎದುರು ನೂತನ ಸಂವಿಧಾನದ ಪ್ರತಿಯನ್ನು ಮಂಡಿಸಿ ಮಾತನಾಡುತ್ತ ಡಾ. ಬಿ ಆರ್. ಅಂಬೇಡ್ಕರ್ ಅವರು ಮುನ್ನೆಚ್ಚರಿಕೆ ರೂಪದಲ್ಲಿ ಹೇಳಿದ ಮಾತುಗಳಿವು -

"ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಆಸಕ್ತಿ ಇರುವ ಎಲ್ಲರಿಗೆ ಜಾನ್ ಸ್ಟುವರ್ಟ್ ಮಿಲ್ ನೀಡಿರುವ ಎಚ್ಚರಿಕೆ ನೆನಪಿನಲ್ಲಿರಬೇಕು. ಅದೇನೆಂದರೆ- ಎಷ್ಟೇ ಶ್ರೇಷ್ಟ ವ್ಯಕ್ತಿಯಾಗಿದ್ದರೂ ನಮ್ಮ ಸ್ವಾತಂತ್ರ್ಯವನ್ನು  ಆ ವ್ಯಕ್ತಿಯ ಪಾದಗಳ ಮುಂದೊಯ್ದು  ಇಡಬಾರದು, ಅಥವಾ ದೇಶದಲ್ಲಿ ಕಟ್ಟಿ ಬೆಳೆಸಿರುವ ಸಂಸ್ಥೆಗಳ ರೂಪವನ್ನೇ ಬದಲಿಸುವ ಶಕ್ತಿಯನ್ನು ಅವರಿಗೆ ಕೊಡಬಾರದು. ದೇಶಕ್ಕೆ ಸೇವೆ ಸಲ್ಲಿಸಿರುವವರಿಗೆ ಕೃತಜ್ಞತೆ ತೋರುವುದು ತಪ್ಪಲ್ಲವಾದರೂ ಕೃತಜ್ಞತೆಗೆ ಮಿತಿಗಳಿವೆ. ಐರಿಷ್ ದೇಶಭಕ್ತ ಡ್ಯಾನಿಯಲ್ ಓ ಕಾನಲ್ ಹೇಳಿರುವಂತೆ ಪುರುಷನೊಬ್ಬ ತನ್ನ ಗೌರವದ ಬೆಲೆತೆತ್ತು ಕೃತಜ್ಞತೆ  ತೋರುವುದು, ಮಹಿಳೆಯೊಬ್ಬಳು ತನ್ನ ಶೀಲದ ಬೆಲೆತೆತ್ತು ಕೃತಜ್ಞತೆ ತೋರುವುದು, ದೇಶವೊಂದು ತನ್ನ ಸ್ವಾತಂತ್ರ್ಯದ ಬೆಲೆತೆತ್ತು ಕೃತಜ್ಞತೆ ತೋರುವುದು - ಇವನ್ನು ಮಾಡಬಾರದು.  ಈ ಎಚ್ಚರಿಕೆ ಬೇರಾವುದೇ ದೇಶಕ್ಕಿಂತ ಹೆಚ್ಚು ಅಗತ್ಯವಾಗಿರುವುದು ಭಾರತಕ್ಕೆ. ಏಕೆಂದರೆ ಬೇರಾವುದೇ ದೇಶಕ್ಕಿಂತ ಭಾರತದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆ ರಾಜಕೀಯದಲ್ಲಿ ನಡೆಯುತ್ತದೆ. ಧರ್ಮದ ವಿಚಾರದಲ್ಲಿ ಭಕ್ತಿಯು ಮುಕ್ತಿಗೆ ಮಾರ್ಗವಾಗಿರಬಹುದು. ಆದರೆ ರಾಜಕಾರಣದಲ್ಲಿ  ಭಕ್ತಿಯು ದಮನಕ್ಕೆ ಮತ್ತು ಸರ್ವಾಧಿಕಾರಕ್ಕೆ ದಾರಿಯಾಗುವುದು ಖಂಡಿತ. "

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಡಿದ ಅಂದಿನ ನಮ್ಮ ರಾಷ್ಟ್ರ ನಾಯಕರು ಸ್ವತಂತ್ರ ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ಸಹಬಾಳ್ವೆ, ಸ್ವಾವಲಂಬನೆ, ಸ್ವಾಭಿಮಾನಗಳು ಮುಖ್ಯ ಗುಣಗಳಾಗಬೇಕೆಂದು ಬಯಸಿದ್ದರು.

ಜವಾಹರಲಾಲ್ ನೆಹರೂ  ಧರ್ಮಗಳು ಹೇಗೆ ಮನಸ್ಸುಗಳನ್ನು ಬಂಧನದಲ್ಲಿಡಬಹುದೆಂಬ ಬಗ್ಗೆ ತಮ್ಮ ಆತ್ಮಕತೆಯಲ್ಲಿ ಹೀಗೆ ಬರೆಯುತ್ತಾರೆ-

"ಸದಾ ಹಿಮ್ಮ್ಮುಖವಾಗಿ ನೋಡುತ್ತಾ, ತಮ್ಮಿಂದ ಕಳಚಿಹೋಗುತ್ತಿರುವುದನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಾಣುವ ಹಿಂದೂಗಳು ಮತ್ತು ಮುಸ್ಲಿಮರು ಶೋಚನೀಯವಾಗಿ ಕಾಣುತ್ತಾರೆ. ಹಿಂದಿನದೆಲ್ಲವನ್ನೂ ತಿರಸ್ಕರಿಸುವುದಾಗಲಿ ಅವಹೇಳನ ಮಾಡುವುದಾಗಲಿ ನನ್ನ ಇಚ್ಛೆಯಲ್ಲ. ಏಕೆಂದರೆ ಅತ್ಯಂತ ಸುಂದರವಾದದ್ದೂ  ನಮ್ಮ ಗತಕಾಲದಲ್ಲಿ ಇದೆ. ಅದು  ಭವಿಷ್ಯದಲ್ಲೂ ಉಳಿಯುತ್ತದೆ. ಆದರೆ ಈ ಜನರು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವುದು ಸುಂದರವಾದದ್ದನ್ನಲ್ಲ.  ಬದಲಿಗೆ, ಅನುಪಯುಕ್ತವಾದದ್ದು. ಮತ್ತು ಬಹಳಷ್ಟು ಸಲ ಹಾನಿಕಾರವಾದದ್ದೂ. "

ಹಿಂದೂ ರಾಷ್ಟ್ರವಾದಿ ನಾಯಕರುಗಳಿಗೆ ಧರ್ಮಕ್ಕಿಂತ ಮಿಗಿಲಾದ ಅದರ್ಶಗಳೇ ಕಾಣಲಿಲ್ಲ. ಧರ್ಮವನ್ನು ರಾಜಕೀಯದಿಂದ ಹೊರಗೆ ಇಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಶ್ಯಕ. ಧರ್ಮದ ಹೆಸರಲ್ಲಿ ಧ್ರುವೀಕರಣಗೊಳಿಸದೆ ಕೇವಲ ಕ್ಷಮತೆ, ಚಾರಿತ್ರ್ಯ, ಸಾಧನೆಗಳ ಬಲದಲ್ಲಿ ಗೆಲ್ಲುವ ವಿಶ್ವಾಸ ನಮ್ಮ ಮಹಾನ್ ನಾಯಕರುಗಳಿಗಿಲ್ಲ. ಇದೆಲ್ಲ ಬಗೆಹರಿಯುವ ಸೂಚನೆಗಳೇ ಕಾಣುತ್ತಿಲ್ಲ.

ವಿವಿಧ ಬಗೆಯ ಧಾರ್ಮಿಕ ಸಂಘಟನೆಗಳು ನೀಡುವ ಅಘೋಷಿತ ಕಾನೂನು ಬಾಹಿರ ಅಧಿಕಾರ ಇವು  ಕೆಲವರಿಗೆ ಆಕರ್ಷಣೆಯಾಗಿವೆ. ಕೆಲವು ಕಡೆ ನಿರುದ್ಯೋಗಿಗಳು, ಅಂಚಿನಲ್ಲಿರುವವರು, ಎಲ್ಲರೊಂದಿಗೆ ಒಂದಾಗಲಾಗದೇ ಒಂದು ಬಗೆಯ ಪರಕೀಯ ಭಾವನೆಯಲ್ಲಿ ನರಳುವವರು, ಇಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ರಾಜಕೀಯ ಗುಂಪುಗಳಲ್ಲಿ ಸೇರುವುದು ಕಾಣಬರುತ್ತಿದೆ. ಗಲಭೆ, ದೊಂಬಿ, ಗುಂಪು ದಾಳಿ ಇಂತವನ್ನೆಲ್ಲ ನಡೆಸುವವರು ಇವರೇ.

ಇನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದೇ ಪರಿಗಣಿಸಲ್ಪಡುವ ಮಾಧ್ಯಮ ಕ್ಷೇತ್ರ ಅದರಲ್ಲೂ ಮುಖ್ಯವಾಗಿ ಟೆಲಿವಿಜನ್ ಮಾಧ್ಯಮವು  ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ  ಆಳುವ ಪಕ್ಷದ ಗುಣಗಾನದಲ್ಲೇ  ತೊಡಗುತ್ತಿರುವ ಬೆಳವಣಿಗೆ  ಆರೋಗ್ಯಕರವಾದದ್ದಲ್ಲ. ಜಾರ್ಜ್ ಆರ್ವೆಲ್ ನ 'ಅನಿಮಲ್ ಫಾರ್ಮ್'ನಲ್ಲಿ ಬಂಡಾಯಕ್ಕೆ ಸಿದ್ದವಾದ ಪ್ರಾಣಿಗಳೆಲ್ಲ ಸೇರಿ ಫಾರಂನ ಯಜಮಾನರ ವಿರುದ್ಧ ಕೂಗಲು ಹುಟ್ಟು ಹಾಕುವ ಸ್ಲೋಗನ್ "ಫೋರ್ ಲೆಗ್ಸ್ ಗುಡ್ ಟೂ ಲೆಗ್ಸ್ ಬ್ಯಾಡ್"ನಂತೆ ಇಂದಿನ ಚರ್ಚೆಗಳಲ್ಲೂ ಅಷ್ಟೇ ಸಿದ್ದ ಸ್ಲೋಗನ್ ಗಳದ್ದೇ ರಾಜ್ಯ. 

ಗುಂಪು ಕಟ್ಟಿಕೊಂಡು ಅಮಾಯಕರ ಹತ್ಯೆ ಮಾಡುತ್ತಿರುವವರನ್ನು, ಅವರ ಬೆನ್ನಿಗೆ ನಿಲ್ಲುವವರನ್ನು ನೋಡುತ್ತಿರುವ ಈ ದಿನಗಳಲ್ಲಿ  ಹೌದು 'ಟೂ ಲೆಗ್ಸ್ ಬ್ಯಾಡ್'.

ಸಾಮಾಜಿಕ  ಮಾಧ್ಯಮಗಳು ಬಂದ  ಮೇಲಂತೂ ನಾಗರಿಕ ಸಂವಾದವೇ ಮರೆಯಾಗುತ್ತಿದೆ. ಸುಳ್ಳುಸುದ್ದಿಗಳನ್ನು ಹರಡಲು  ಇಂತಹ ಮಾಧ್ಯಮಗಳ ಬಳಕೆಯಾಗುತ್ತಿದೆ.  ಎಲ್ಲಕ್ಕಿಂತ ಬೇಸರದ ಸಂಗತಿಯೆಂದರೆ ಪೂರ್ವಾಗ್ರಹಗಳಿಲ್ಲದೆ, ಹೊಸ ದೃಷ್ಟಿಯಿಂದ ವಿಚಾರ ಮಾಡುವ ಸಾಧ್ಯತೆಯಿದ್ದ ನಮ್ಮ ಹೊಸ ತಲೆಮಾರಿನವರು ಸಹ ನಮ್ಮ ರಾಜಕೀಯ, ಸಾಮಾಜಿಕ ಸಮಸ್ಯೆಗಳ ಹಿನ್ನೆಲೆ, ಜಟಿಲತೆಗಳನ್ನು ಅರಿಯುವ ಗೋಜಿಗೆ ಹೋಗದೆ  ರಾಜಕೀಯ ದಾಳಗಳಾಗುತ್ತಿರುವುದು. ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯ ಅಭಿಮತವು ದಬ್ಬಾಳಿಕೆಗೆ ಬಳಸಲ್ಪಡಬಾರದೆಂಬ ಅರಿವು, ಮಾನವೀಯತೆ, ನ್ಯಾಯವಂತಿಕೆ ಇವೆಲ್ಲವನ್ನೂ ಮರೆತ ಸ್ಥಿತಿಯಲ್ಲಿ ನಾವಿದ್ದೇವೆ.

ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಯವಾದ ಸೂಚನೆ  ಹಾಗೂ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಖಚಿತ ಎಚ್ಚರಿಕೆ ಇವೆರಡನ್ನೂ ಗಂಭೀರವಾಗಿ  ಪರಿಗಣಿಸುವ  ಅಗತ್ಯ ಇಂದು ಖಂಡಿತವಾಗಿಯೂ ಇದೆ.

Saturday, March 11, 2017

ಘಾಚರ್ ಘೋಚರ್ - ವಿವೇಕ್ ಶಾನಭಾಗ್

ಈ ಕಾದಂಬರಿಯ ನಿರೂಪಕ ಒಬ್ಬ ನಗರವಾಸಿ ಮಧ್ಯಮ ವರ್ಗದ ಯುವಕ. ಕೂಡು ಕುಟುಂಬದವನಾದ ಇವನ ಕುಟುಂಬದವರು ಒಂದು ಕಾಲದಲ್ಲಿ ತೀರಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ನಂತರ ಇವನ ಚಿಕ್ಕಪ್ಪ ಆರಂಭಿಸಿದ ಮಸಾಲೆ ಪದಾರ್ಥಗಳ ವ್ಯವಹಾರದಿಂದ ಒಮ್ಮಿಂದೊಮ್ಮೆಲೆ ಹಣವಂತರಾದವರು. ಇಕ್ಕಟ್ಟಾದ, ರೈಲ್ವೆ ಬೋಗಿಗಳಂತಹ ಕೋಣೆಗಳ ಮನೆಯಿಂದ, ಪ್ರತಿಷ್ಟಿತ ಬಡಾವಣೆಯ ವಿಶಾಲವಾದ ಮನೆಗೆ ಕುಟುಂಬವು ಸ್ಥಳಾಂತರವಾದಾಗ ಹೊಸ ಜೀವನ ಶೈಲಿಗೆ ಹೊಂದಿಕೊಳ್ಳುವ ಸನ್ನಾಹದಲ್ಲಿ  ಪರಸ್ಪರ ಸಂಬಂಧಗಳು, ಮನೋಭಾವಗಳು, ನಿಷ್ಟೆ ಗಳು ಬದಲಾಗುತ್ತವೆ. ಅದ್ಧೂರಿಯಿಂದ ನಡೆಸುವ ಮದುವೆಗಳು ಮುರಿದು ಬೀಳುತ್ತ ವೆ. ಒಳಗೊಳಗೇ ಮೌನ ಯುದ್ಧಗಳು ಆರಂಭವಾಗುತ್ತವೆ. ಎಲ್ಲವೂ ಘಾಚರ್ ಘೋಚರ್ ಆಗಿಬಿಡುತ್ತದೆ.  ಸಂಕ್ಷೇಪವಾಗಿ ಹೇಳುವುದಾದರೆ ಇದಿಷ್ಟು ಇಲ್ಲಿ ನಡೆಯುವ ಕತೆ.

ಕಳೆದ ಎರಡು ಮೂರು ದಶಕಗಳಲ್ಲಿ, ಮುಖ್ಯವಾಗಿ ಜಾಗತೀಕರಣ ಮತ್ತು ನವೋದ್ಯಮಗಳು ದೇಶದಲ್ಲಿ ತಂದಿರುವ ಆರ್ಥಿಕ ಪ್ರಗತಿ ಮತ್ತದರ  ಸಾಮಾಜಿಕ ಹಾಗೂ ಕೌಟುಂಬಿಕ ಪರಿಣಾಮಗಳು ಇವು ಎಲ್ಲರ ಅನುಭವವೇನೋ ನಿಜ. ಆದರೆ ಈ ಬದಲಾವಣೆಗಳು ಗಮನಕ್ಕೇ ಬಂದಿರುವುದಿಲ್ಲ. ಸೂಕ್ಷ್ಮ ಸಂವೇದನೆಯುಳ್ಳ ಸಾಹಿತಿ ಕನ್ನಡಿ ಹಿಡಿದು ತೋರಿಸಿದಾಗಲೇ ದೈನಂದಿನ ಜೀವನದಲ್ಲಿ ನಡೆಯುವ  ಅನೇಕ ವಿಪರೀತಗಳು, ಸೂಕ್ಷ್ಮ ಕ್ರೌರ್ಯಗಳು ನಮಗೆ ಹೊಳೆಯುವುದು. 

ಇಂದಿನ ಬದಲಾಗುತ್ತಿರುವ ಮೌಲ್ಯಗಳು , ಮರೆಯಾಗುತ್ತಿರುವ ಸಣ್ಣ ಪುಟ್ಟ ಸೌಜನ್ಯಗಳು , ಸ್ವಕೇಂದ್ರಿತ ಮನೋಭಾವಗಳು, ಅಂತಸ್ತಿನ ಅಹಂಕಾರಗಳು, ಎಲ್ಲವೂ  ಕತೆಯಲ್ಲಿ ತಣ್ಣನೆಯ ದನಿಯಲ್ಲಿ, ನವಿರಾದ ನಿರೂಪಣೆಯ ಮೂಲಕ ಅನಾವರಣಗೊಳ್ಳುವ ಬಗೆ  ಅಂತಃಕರಣವಿರುವ ಯಾರನ್ನೂ ಪ್ರಕ್ಷುಬ್ಧಗೊಳಿಸದೇ ಇರಲಾರದು.

ಒಂದೆಡೆ ನಿರೂಪಕ ಹಣದ ಪರಿಣಾಮದ ಬಗೆಗೆ ಹೀಗೆ ಹೇಳುತ್ತಾನೆ- "ದುಡ್ಡು ನಮ್ಮನ್ನೇ ಅಡಿಸುತ್ತದೆ ಅನ್ನುವ ಮಾತು ಸುಳ್ಳಲ್ಲ. ಅದಕ್ಕೂ ಒಂದು ಸ್ವಭಾವ, ಶಕ್ತಿ ಇರುತ್ತದೆಯೋ ಏನೋ." ಕನ್ನಡದ ಅನೇಕ ಗಾದೆಗಳೂ ಅತ್ಯಂತ ಪರಿಣಾಮಕಾರಿಯಾಗಿ ಈ ಕೃತಿಯಲ್ಲಿ ಬಳಕೆಯಾಗಿವೆ. ಉದಾಹರಣೆಗೆ- ಎಲ್ಲರ ಮನೆಯ ದೋಸೆಯೂ ತೂತೇ, ದುಡ್ಡು ಬಂತೂ ಅಂತ ಬೆಳದಿಂಗಳಲ್ಲೂ ಕೊಡೆ ಹಿಡಿದರಂತೆ, ಸಿರಿ ಗರದ ಹಾಗೆ ಬಡಿಯಬಾರದು ಮರದ ಹಾಗೆ ನಿಧಾನ ಬೆಳೆಯಬೇಕು,...ಇತ್ಯಾದಿ.

'ಘಾಚರ್ ಘೋಚರ್' ಮೊದಲಿಗೆ, 2013 ರಲ್ಲಿ ಪ್ರಕಟವಾಗಿದ್ದು ಅದೇ ಹೆಸರಿನ ಕತಾ ಸಂಗ್ರಹದ ಒಂದು ಕತೆಯಾಗಿ. 2015 ರಲ್ಲಿ ಇದು ಕಾದಂಬರಿ ರೂಪದಲ್ಲಿ ಇಂಗ್ಲಿಷಿಗೆ ಅನುವಾದವಾದ ನಂತರ ಪಡೆದಿರುವ ಪ್ರಸಿದ್ಧಿ ಅದ್ಭುತ. ಈ ವರ್ಷ ಅಮೆರಿಕದಲ್ಲೂ ಪೆಂಗ್ವಿನ್ ಪ್ರಕಾಶನದಡಿ ಇದು ಪ್ರಕಟವಾಗಿ ಸಾಕಷ್ಟು ಚರ್ಚೆ ಹಾಗೂ ಪ್ರಶಂಸೆ ಗಳಿಸಿದೆ.

ಅನುವಾದದ ಮೂಲಕ BBC, Publisher's Weekly, New Yorker, ಇತ್ಯಾದಿ ಪ್ರತಿಷ್ಟಿತ ವಿದೇಶಿ ಮಾಧ್ಯಮ ಸಮೂಹಗಳ ಮನ್ನಣೆ ಗಳಿಸಿರುವ ಘಾಚರ್ ಘೋಚರ್ ಕೃತಿಯು ಮೂಲ ಭಾಷೆಯಾದ ಕನ್ನಡದಲ್ಲೇ ಅದೇಕೋ ಅಷ್ಟೊಂದು ಚರ್ಚೆಯಾಗಲಿಲ್ಲ. ಕನ್ನಡದಲ್ಲಿ ಸಹೃದಯ ಓದುಗರ ಕೊರತೆ ಇದಕ್ಕೆ ಕಾರಣವೋ ಅಥವಾ 'ಹಿತ್ತಲ ಗಿಡ ಮದ್ದಲ್ಲ' ಎನ್ನುವಂತೆ ಕನ್ನಡಿಗರಿಗೂ ಇಂಗ್ಲಿಷ್ ಆವೃತ್ತಿಯೇ ಪ್ರಿಯವೋ ಗೊತ್ತಿಲ್ಲ.

ವಿಶ್ವದಾದ್ಯಂತ ಪುಸ್ತಕ ಪ್ರೇಮಿಗಳ ನೆಚ್ಚಿನ ಅಂತರ್ಜಾಲ ತಾಣವಾದ goodreads.com ನಲ್ಲೂ ಘಾಚರ್ ಘೋಚರ್ ನ್ನು ಮೆಚ್ಚಿರುವ, ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವವರ ಸಂಖ್ಯೆ 700 ಕ್ಕೂ ಹೆಚ್ಚು. ವಿವೇಕರ ಉಳಿದ  ಕಾದಂಬರಿಗಳಿಗಿಂತ ಘಾಚರ್ ಘೋಚರ್ ಹೆಚ್ಚು ಆಕರ್ಷಣೆಗೆ ಒಳಗಾಗಿರುವುದಕ್ಕೆ ಬಹುಶಃ ಈ ಕೃತಿಯು ಸಂಪೂರ್ಣ ನಗರ ಕೇಂದ್ರಿತ ಕತೆಯನ್ನು ಹೊಂದಿರುವುದು ಕಾರಣವಾಗಿರಬಹುದು.

ಘಾಚರ್ ಘೋಚರ್ ನ ಪ್ರಖ್ಯಾತಿಯು  ಅವರ ಇತರ ಕಾದಂಬರಿಗಳನ್ನೂ ಮತ್ತು ಕನ್ನಡದ ಇತರ ಲೇಖಕರ ಕಾದಂಬರಿಗಳನ್ನೂ ಮುಂಚೂಣಿಗೆ ತಂದು ಅವುಗಳ ಓದು, ವಿಮರ್ಶೆ, ಚರ್ಚೆಗಳಿಗೆ ಕಾರಣವಾದರೆ ಒಳ್ಳೆಯದು.  ಧಾವಂತದ ಇಂದಿನ ಬದುಕಿನಲ್ಲೂ ಕತೆ, ಕಾದಂಬರಿಗಳ ಓದಿನ ಅಗತ್ಯ ಇದೆ. 

ಸಾಹಿತ್ಯದ ಅಗತ್ಯತೆಯ ಕುರಿತು ಚಿತ್ತಾಲರು ತಮ್ಮ ಒಂದು ಲೇಖನದಲ್ಲಿ ಹೀಗೆ ಬರೆದಿದ್ದರು-
"ನಾವು ವಿಚಾರ ಮಾಡುವ, ಭಾವಿಸುವ, ಹಾಗೂ ನೋಡುವ ಮಟ್ಟಗಳು (standards of thinking, standards of feeling, standards of seeing) ಎತ್ತರಗೊಂಡು ನಾವು ಮಾನವರಾಗಿ ಅರಳುವ ಸಾಧ್ಯತೆಯೇ ಸಾಹಿತ್ಯ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯೆಂದು ನಾನು ನಂಬುತ್ತೇನೆ. ಬದುಕಿನ ಬಗ್ಗೆ ನಾವು ಬೆಳೆಯಿಸಿಕೊಂಡ ತಪ್ಪು ಅಪೇಕ್ಷೆಗಳಿಂದಾಗಿ ಮನುಷ್ಯ-ಜೀವನಕ್ಕೆ ಅರ್ಥ ತಂದುಕೊಡಬಹುದಾದಂಥ ಗಂಭೀರ ಭಾವನೆಗಳೇ ಭ್ರಷ್ಟವಾಗುತ್ತ, ನಮ್ಮ ಸಾಮಾಜಿಕ ಜೀವನದ ಮೇಲೆ, ರಾಜಕೀಯ ನಡವಳಿಕೆಯ ಮೇಲೆ ಅತ್ಯಂತ ದುಷ್ಟವಾದ, ಅನಾರೋಗ್ಯಕರವಾದ ಪರಿಣಾಮ ಉಂಟಾಗುತ್ತಿರುವ ಇಂದಿನ ಕಾಲದಲ್ಲಿ, ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವುಗಳನ್ನು ಕಾಪಾಡಿಕೊಳ್ಳುವುದರಲ್ಲಿ ಕಲೆಗಳು, ಬಹು ಮುಖ್ಯವಾಗಿ ಸಾಹಿತ್ಯ ವಹಿಸಬಹುದಾದ ಪಾತ್ರವನ್ನು ಒತ್ತಿ ಹೇಳಿದಷ್ಟೂ ಕಡಿಮೆಯೆನಿಸುತ್ತದೆ." 

ಚಿತ್ತಾಲರು  ನಲವತ್ತು ವರ್ಷಗಳ ಹಿಂದೆ ಬರೆದ ಈ ಸಾಲುಗಳು ಇಂದಿಗೂ ಖಂಡಿತವಾಗಿಯೂ ಪ್ರಸ್ತುತವೇ. ಘಾಚರ್ ಘೋಚರ್ ನಂತಹ ಕೃತಿಯು ಚಿತ್ತಾಲರ ಆಶಯದ ಅಂತಹದ್ದೇ ಸಾಹಿತ್ಯದ ಮಾದರಿ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಕೃತಿಯು ಚಿತ್ತಾಲರಿಗೇ ಅರ್ಪಣೆಯಾಗಿರುವುದು ಅತ್ಯಂತ ಔಚಿತ್ಯಪೂರ್ಣ. 

Sunday, September 11, 2016

ಕುವೆಂಪು ಅವರ ಕಾನೂರು ಹೆಗ್ಗಡಿತಿ


ನಾನು ಓದಿದ ಮೊದಲ ಕನ್ನಡ ಕಾದಂಬರಿ ಕುವೆಂಪು ಅವರ ಕಾನೂರು ಹೆಗ್ಗಡಿತಿ. ಮಾಧ್ಯಮಿಕ ಶಾಲೆಯಲ್ಲಿ  ಓದುತ್ತಿದ್ದಾಗ  ಬೇಸಿಗೆ ರಜೆಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಕಣ್ಣಿಗೆ ಬಿದ್ದ ಈ ಪುಸ್ತಕವನ್ನು ಓದಲು ಆರಂಭಿಸಿ, ಎರವಲು ಪಡೆದು ಮನೆಗೂ ತಂದು ಓದಿ ಮುಗಿಸಿದ್ದು ನೆನಪಿದೆ. ಸುಮಾರು ಆರು ನೂರು ಪುಟಗಳ ಕಾದಂಬರಿ ಓದಿ ಮುಗಿಸಲು ಬಹುಶಃ ಆ ರಜೆಯ ಬಹುಭಾಗವೇ ಹಿಡಿದಿರಬೇಕು. ಈಗ ಹತ್ತು ವರ್ಷಗಳ ಹಿಂದೆ ಮತ್ತೊಮ್ಮೆ ಓದುವಾಗಲೂ ಕಾದಂಬರಿಯ ಸ್ವಾರಸ್ಯಕಡಿಮೆಯಾದಂತೆ ಅನಿಸಲಿಲ್ಲ.

೧೯೩೬ರಲ್ಲಿ ಪ್ರಕಟವಾದ ಈ ಕಾದಂಬರಿಯು ಒಳಗೊಳ್ಳುವ ಪರಿಸರ ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಎಂಬ ಹೆಸರಿನಿಂದ ಗುರುತಿಸಲ್ಪಡುವ ಪ್ರದೇಶ. ನನ್ನ ಊರು ಅದೇ ಪ್ರದೇಶದಲ್ಲಿರುವುದರಿಂದ ಈ ಕಾದಂಬರಿಯಲ್ಲಿ ವರ್ಣನೆಗೊಳ್ಳುವ ಹಲವಾರು ಸ್ಥಳ ಹಾಗೂ ವ್ಯಕ್ತಿಚಿತ್ರಗಳು ನಮಗೆಲ್ಲ ಹೊಸತಾಗಿರಲಿಲ್ಲ. ಆದರೂ ಆ ಕಾರಣಕ್ಕಾಗಿ ಕಾದಂಬರಿಯ ಸ್ವಾರಸ್ಯ ನನಗೇನೂ ಕಡಿಮೆಯಾಗಿರಲಿಲ್ಲ.  ಮಲೆನಾಡಿನವರಲ್ಲದ ಓದುಗರಿಗಂತೂ ಇದೊಂದು ಹೊಸ ಪ್ರಪಂಚ. ಕುವೆಂಪು ಅವರಂತಹ ಕಲ್ಪನೆ, ಒಳನೋಟ, ಜೀವನ ಪ್ರೀತಿ ಎಲ್ಲವೂ ಬೆರೆತ ಕೃತಿಕಾರನ ಲೇಖನಿಯಲ್ಲಿ ಮಲೆನಾಡಿನ ಪ್ರಕೃತಿ ಲೋಕ ಕಣ್ಣೆದುರಿಗೇ ನಿಂತಷ್ಟು ನೈಜತೆಯಲ್ಲಿ ಮೂಡಿ ಬರುತ್ತದೆ.

ಕಾದಂಬರಿಯ 'ಅರಿಕೆ'ಯಲ್ಲಿ ಕುವೆಂಪು ಅವರೇ ಹೇಳಿರುವಂತೆ 'ಕಾದಂಬರಿ ಅಂಗೈ ಮೇಲಣ ನಾಟಕಶಾಲೆ'. ವಿಧ ವಿಧದ ದೃಶ್ಯಗಳ, ವ್ಯಕ್ತಿಗಳ, ಸನ್ನಿವೇಶಗಳ ಪೂರ್ಣ ಸ್ವಾರಸ್ಯ ಸಿಗಲು ಅವುಗಳು ಓದುವವರ ಪ್ರತಿಭೆಯಲ್ಲಿ ಮತ್ತೊಮ್ಮೆ ಸೃಷ್ಟಿಯಾಗಬೇಕಾಗುತ್ತದೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ, ಕಳೆದ ಶತಮಾನದ ಆರಂಭದ ಕಾಲಘಟ್ಟದಲ್ಲಿ ಮಲೆನಾಡು ಪ್ರದೇಶದ ಸೂಕ್ಷ್ಮ ಸಾಮಾಜಿಕ, ರಾಜಕೀಯ ಬದಲಾವಣೆಗಳನ್ನು ಅಲ್ಲಿನ ಕೆಲವು ಕುಟುಂಬಗಳ ಜನರ ಬದುಕಿನ ಹಿನ್ನೆಲೆಯಲ್ಲಿ ಈ ಕಾದಂಬರಿಯ ಓದುಗರು ಗ್ರಹಿಸಬಹುದು. ಜಮೀನುದಾರಿಕೆಯ ದರ್ಪ, ಅಧಿಕಾರದ ಪ್ರತಿನಿಧಿಯಂತಿರುವ ಕಾನೂರು ಚಂದ್ರಯ್ಯಗೌಡರ ಕುಟುಂಬವು ಕತೆಯ ಕೇಂದ್ರಬಿಂದು. ಈ ಕುಟುಂಬದ ಒಳಗಿನ ಹಾಗೂ ಹೊರಗಿನ ಸಂಬಂಧಗಳು ಅಂದಿನ ಕಾಲದ ಕೌಟುಂಬಿಕ ಹಾಗೂ ಸಾಮೂಹಿಕ ಜೀವನದ ಪ್ರತಿಮೆಗಳಾಗಿ ಕಾಣಬರುತ್ತವೆ.

ಕಾದಂಬರಿಯ ಕಡೆಯಲ್ಲಿ ಒದಗಿಸಿರುವ ಅನುಬಂಧ-೩ ರಲ್ಲಿ ಕಾದಂಬರಿಯ ಪಾತ್ರಗಳ ಪರಿಚಯ ಇದೆ. ಇದರಲ್ಲಿ ಚಂದ್ರಯ್ಯಗೌಡರ ಪರಿಚಯ  ಹೀಗಿದೆ: ಕಾನೂರು ಮನೆತನದ ಯಜಮಾನ. ಅಣ್ಣ ಸುಬ್ಬಯ್ಯಗೌಡರು ಗತಿಸಿದ ಮೇಲೆ ಈತನೇ ಮನೆಯ ಯಜಮಾನ. ಅಣ್ಣ ಸುಬ್ಬಯ್ಯಗೌಡರು ಸಾಯುವಾಗ ಅವರಿಗೂ ಚಂದ್ರಯ್ಯಗೌಡರಿಗೂ ಮನಸ್ತಾಪವಿತ್ತು. ಹಾಗಾಗಿ ಅಣ್ಣನ ಮಗ ಹೂವಯ್ಯ ಮತ್ತು ಅತ್ತಿಗೆ ನಾಗಮ್ಮನವರ ಬಗ್ಗೆ ಅನಾದರ. ಮೊದಲ ಇಬ್ಬರು ಹೆಂಡತಿಯರು ಗತಿಸಿದ ಮೇಲೆ ನೆಲ್ಲುಹಳ್ಳಿಯ ಸುಬ್ಬಮ್ಮನನ್ನು ಮೂರನೆಯ ಹೆಂಡತಿಯಾಗಿ ತಂದರು.

ಕಾದಂಬರಿಯ ಶೀರ್ಷಿಕೆಯ ಪಾತ್ರ ಇದೇ ಸುಬ್ಬಮ್ಮನದು. ತನ್ನ ಕಾರ್ಯ ಸಾಧನೆಗೆ ಕುಟಿಲ ಮಾರ್ಗವನ್ನು ಹಿಡಿಯಲು ಹಿಂಜರಿಯದ ಹೆಂಗಸು ಸುಬ್ಬಮ್ಮ. ಗಂಡನ ಸಾವಿನ ನಂತರ ಮನೆಯಲ್ಲಿ ತನ್ನ ಅಧಿಕಾರ ಸ್ಥಾಪಿಸಲು ಹೊರಡುವ ಈಕೆ ಒಬ್ಬ ಉದ್ವಿಗ್ನ ವ್ಯಕ್ತಿತ್ವದ ದುಡುಕಿನ ಮಹಿಳೆಯಾಗಿ ಕಾಣಬರುತ್ತಾಳೆ.

೧೯೯೯ರಲ್ಲಿ ಗಿರೀಶ್ ಕಾರ್ನಾಡರು ನಿರ್ದೇಶಕರಾಗಿ ತೆರೆಗೆ ತಂದ  ಇದೇ ಕಾದಂಬರಿ ಆಧಾರಿತ ಚಲನಚಿತ್ರವು ಈ ಬೃಹತ್ ಕಾದಂಬರಿಯ ಸಂಪೂರ್ಣ ಪರಿಚಯ ಮಾಡಿಸದಿದ್ದರೂ ಚಂದ್ರಯ್ಯಗೌಡನಾಗಿ ಕಾರ್ನಾಡರ ಅಭಿನಯ ಉತ್ತಮವಾಗಿ ಮೂಡಿ ಬಂದಿದೆ.  ಉತ್ತರ ಕರ್ನಾಟಕ ಮೂಲದ ಕಾರ್ನಾಡರ ಮಾತಿನ ಶೈಲಿ ಮಲೆನಾಡು ಗೌಡರ ಮಾತಿನ ಶೈಲಿಗೆ  ಹೊಂದಿಕೆಯಾಗದಿದ್ದರೂ ಭಾವಾಭಿನಯವು ನನ್ನ ಕಲ್ಪನೆಯ ಕಾದಂಬರಿಯ ಪಾತ್ರಕ್ಕೆ ತುಂಬಾ ಹೊಂದಿಕೆಯಾಗುತ್ತಿತ್ತೆಂದು ನೆನಪು.

ಈ ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರವೆಂದರೆ ಹೂವಯ್ಯ. "ತನ್ನ ಸುಶಿಕ್ಷಿತತೆ, ಆಧ್ಯಾತ್ಮಿಕತೆ ಮತ್ತು ಕ್ರಿಯಾಶೀಲತೆಯಿಂದ ಸುತ್ತಲಿನವರ ಬದುಕನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಾನೆ" ಎಂದು ಆತನ ಪಾತ್ರದ ಬಗೆಗೆ ಅನುಬಂಧದಲ್ಲಿ ನಮೂದಾಗಿದೆ.

ಕಾದಂಬರಿಯುದ್ದಕ್ಕೂ ಅಂದಿನ ಮಲೆನಾಡಿನ ಬದುಕಿನ ಸಹಜ ಚಟುವಟಿಕೆಗಳಾದ ಮೀನು ಹಿಡಿಯುವುದು, ಹಂದಿ ಶಿಕಾರಿ, ಕಳ್ಳು ಕಟ್ಟುವುದು, ಮರ ಕುಯ್ಯುವುದು, ದಯ್ಯದ ಹರಕೆ, ಭೂಮಿ ಹುಣ್ಣಿಮೆಯಂತಹ ಹಬ್ಬಗಳು ಇತ್ಯಾದಿಗಳ ವರ್ಣನೆಗಳು ಅತ್ಯಂತ ಪ್ರಭಾವಯುತವಾಗಿವೆ. ಚಿಕ್ಕಪುಟ್ಟ ಸಂಗತಿಗಳೂ ವಿವರಗಳೊಂದಿಗೆ ದಾಖಲಾಗಿವೆ.

ಲಿಯೋ ಟಾಲ್ ಸ್ಟಾಯ್ ಬರೆದ 'ಆನಾ ಕರೆನಿನಾ' ಓದುವಾಗಲೂ ಇದೇ ಬಗೆಯ ಓದಿನ ಅನುಭವವಾದದ್ದು ನೆನಪಾಗುತ್ತದೆ. ತೋಟದಲ್ಲಿ ಹುಲ್ಲು ಕತ್ತರಿಸುವ ವಿವರಣೆಗೇ ಟಾಲ್ ಸ್ಟಾಯ್ ಒಂದೆರಡು ಅಧ್ಯಾಯಗಳನ್ನೇ ಮೀಸಲಿಟ್ಟಿರುವುದು, ಹಾಗೆಯೇ ಅದೇ ಕಾದಂಬರಿಯಲ್ಲಿ ಬರುವ ಬೇಟೆಯ ದೀರ್ಘ ವಿವರಣೆ- ಇವೆಲ್ಲ ಇಂತಹ ಕಾದಂಬರಿಗಳಲ್ಲಿ ಬಾಹ್ಯ ಚಟುವಟಿಕೆಗಳ ವಿವರಣೆಗಳೂ ಭಾವ ಪ್ರಪಂಚದ ವಿವರಣೆಗಳಂತೇ  ಹೇಗೆ ಮುಖ್ಯವಾಗುತ್ತವೆಂಬುದನ್ನು  ತೋರುತ್ತವೆ.

ಇಂತಹ ಕಾದಂಬರಿಗಳಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಒಂದು ಸಮೂಹದ ಜೀವನದ ಒಂದೊಂದು ಅನುಭವಗಳನ್ನೂ ಅತ್ಯಂತ ಆಸಕ್ತಿಯಿಂದ, ಸಹಾನುಭೂತಿಯಿಂದ ಗಮನಿಸುವ ಕೃತಿಕಾರರು ಓದುಗರಿಗೆ ಒದಗಿಸುವುದು ಒಂದು ಜೀವನಕ್ರಮದ ಸಮಗ್ರ ಚಿತ್ರವನ್ನು. ವ್ಯಕ್ತಿಗತ ಮನೋಸ್ಥಿತಿ, ಸಾಮಾಜಿಕ ಸ್ಥಿತಿ ಎಲ್ಲವೂ ಕೃತಿಯ ಭಾಗಗಳಾಗುತ್ತವೆ.

ಕಾನೂರು ಹೆಗ್ಗಡತಿ ಕಾದಂಬರಿಯು ಅಂದಿನ ಮಲೆನಾಡಿನ ಜೀವನಕ್ರಮವನ್ನು ಪ್ರತಿಫಲಿಸುತ್ತಾ ಜಡ್ಡು ಹಿಡಿದ ಹಲವು ಆಚರಣೆಗಳು, ನಂಬಿಕೆಗಳನ್ನು ಬದಲಾಯಿಸಿಕೊಳ್ಳುವ ಅಗತ್ಯವನ್ನು ತೋರಿಸುತ್ತದೆ. ಹೂವಯ್ಯನ ಪಾತ್ರ ಹಲವು ಸಂದರ್ಭಗಳಲ್ಲಿ ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವುದು ಈ ಬದಲಾವಣೆಗಳ ಮಾರ್ಗ ಸೂಚನೆಯಂತೇ ತೋರುತ್ತದೆ.

"ಇದನ್ನು ಕಥೆಯ ಕೋಲಾಹಲಕ್ಕಾಗಿ ಓದಬೇಡಿ, ಸಾವಧಾನವಾಗಿ ಸಚಿತ್ರವಾಗಿ ಓದಿ" ಎಂದು ಕುವೆಂಪು ಅವರು 'ಅರಿಕೆ'ಯಲ್ಲಿ ಹೇಳಿದ್ದರೂ 'ಕಾನೂರು ಹೆಗ್ಗಡಿತಿ' ಯ ಕಥೆಯೂ, ಕಥೆಯೊಳಗಿನ ಉಪಕಥೆಗಳೂ ಸಹ ತೀವ್ರವಾದ ಒಂದು ಅನುಭವಕ್ಕೆ ಪೂರಕವಾಗುತ್ತವೆ.

ಹೂವಯ್ಯ-ಸೀತೆಯರ ತಣ್ಣನೆಯ ಹಾಗೂ ಅಂತಿಮವಾಗಿ ದುರಂತಮಯವಾದ ಪ್ರೇಮದ ಕಥೆಯು  ಕಾನೂರು ಹೆಗ್ಗಡಿತಿಯ ನವಿರಾದ ಕಥಾ ಸೆಲೆಗಳಲ್ಲೊಂದು. ಈ ಬೃಹತ್ ಕಾದಂಬರಿಯ ಅನೇಕ ಆಕರ್ಷಣೆಗಳ ಒಂದು ಸಣ್ಣ ಮಾದರಿಯಾಗಿ, ಹೂವಯ್ಯ-ಸೀತೆಯರ ಪ್ರೇಮಕಥೆಯು ಅನಾವರಣಗೊಳ್ಳುವ ಕಾದಂಬರಿಯ ಕೆಲ ಭಾಗಗಳನ್ನು ಇಲ್ಲಿ ಉಲ್ಲೇಖಿಸಬಹುದು-

ಸುಸಂಸ್ಕೃತೆ, ರೂಪವತಿ ಹಾಗೂ ಭಾವಜೀವಿಯಾದ ಸೀತೆ ಹೂವಯ್ಯನನ್ನು ಬಾಲ್ಯದಿಂದಲೂ ಮೆಚ್ಚಿಕೊಳ್ಳುತ್ತಾ, ತನ್ನ ಯೌವ್ವನದಲ್ಲೂ ಅವನನ್ನೇ ಆರಾಧಿಸುವಳು. ಇದು ಅನಾವರಣಗೊಳ್ಳುವ ಕೆಲ ಘಟನಾವಳಿಗಳು ಹೀಗಿವೆ-

ಸೀತೆ (ಅಧ್ಯಾಯ ನಾಲ್ಕು)-
ಹೂವಯ್ಯ ಭಾವ ಬರುವರೆಂದು ಸಡಗರ, ಸಂಭ್ರಮ. ಎಳೆಯ ದಿನಗಳಲ್ಲಿ ಇಬ್ಬರೂ ಆಟ ಪಾಠಗಳಲ್ಲಿ ಬೆರೆತು ಕಾಲ ಕಳೆದದ್ದು , ಸೀತೆ ವಧುವಾಗಿ ಹೂವಯ್ಯ ವರನಾಗಿ ಮದುವೆಯ ಆಟ ಆಡಿದ್ದು ನೂತನ ವಧುವರರು ತೀರ್ಥಹಳ್ಳಿಯ ಎಳ್ಳಮವಾಸ್ಯೆ ಜಾತ್ರೆಗೆ ಮೇಳಿಗೆ ತೇರಿಗೆ ಹೋಗಿಬಂದದ್ದು, ಬಟ್ಟೆ ಸುತ್ತಿ ಮಗುವೆಂದು ನಲಿದದ್ದು, ಗಂಡ ಹೂವಯ್ಯ ಮುನಿದದ್ದು ರಾಮಯ್ಯ ಜಗಳ ಬಿಡಿಸಿದ್ದು ಎಲ್ಲ ನೆನಪಾಗುವುದು. ಸಂಭ್ರಮದಿಂದ ತಾಯಿಗೆ ಹೋಳಿಗೆ ಮಾಡಲು ನೆರವಾಗುವಳು.

ಬರುತ್ತಿರುವ ಹೂವಯ್ಯನನ್ನು ಮೆಚ್ಚಿಸಲು ಅಲಂಕಾರದಲ್ಲಿ ತೊಡಗುವಳು, ಮುಚ್ಚಿರುವ ಬಾಗಿಲ ಆಚಿನಿಂದ ಅವಳ ಪುಟ್ಟ ತಂಗಿ ಲಕ್ಷ್ಮಿ ತಾನೂ ಒಳಗೆ ಬರುವೆನೆಂದು ಗಲಾಟೆ ಮಾಡಿದಾಗ ಅವಳನ್ನು ಮುದ್ದು ಮಾಡಿ ನಿನಗೂ ತಲೆ ಬಾಚಿ ಹೂ ಮುಡಿಸುತ್ತೇನೆಂದು ಹೇಳಿ ಇವತ್ತು ಹೂವಯ್ಯ ಭಾವ ಬರುತ್ತಾರೆ ಎಂದು ಲಕ್ಷ್ಮಿಗೂ ಹೇಳುವಳು.

ಬರುತ್ತಿರುವಾಗ ಗಾಡಿ ಉರುಳಿ ಬಿದ್ದು ಬೆನ್ನು ನೋವು ಮಾಡಿಕೊಂಡಿದ್ದ ಹೂವಯ್ಯನಿಗೆ ನರ್ಸಮ್ಮನಾಗಿ ಶುಶ್ರೂಷೆ ಮಾಡುವಳು.

ಹಲ್ಲಿಯ ಕೃಪೆ (ಅಧ್ಯಾಯ ಹದಿನೈದು)-
ಮುತ್ತಳ್ಳಿಯಲ್ಲಿ ಸುಧಾರಿಸಿಕೊಳ್ಳುತ್ತಿದ್ದ ಹೂವಯ್ಯನನ್ನು ಜಗಲಿಯಲ್ಲಿ ಗದ್ದಲ ಎಂದು ಸೀತೆಯ ಅಲಂಕಾರದ ಕೋಣೆಯಲ್ಲಿ ಮಲಗಿಸಿರುತ್ತಾರೆ. ಇಬ್ಬರೇ ಕೋಣೆಯಲ್ಲಿರುವಾಗ ಸೀತೆಗೆ ಮಾತನಾಡಬೇಕೆಂಬ ಕುತೂಹಲ. ಆದರೆ ಸಂಕೋಚ, ಲಜ್ಜೆ, ಭಯ. ಹೂವಯ್ಯನ ಪರಿಸ್ಥಿತಿಯೂ ಅಂತಹುದೇ. ಈ ನಡುವೆ ಗೋಡೆಯಲ್ಲಿ ಕುಳಿತಿದ್ದ ಹಲ್ಲಿಯೊಂದು ಮುಂದಕ್ಕೆ ಚಲಿಸಿತು. ಆಗ ಅದು ಕುಳಿತಿದ್ದ ಜಾಗ ತೆರವಾಯಿತು. ಅಲ್ಲಿ "ನಾನು ಹೂವಯ್ಯ ಭಾವನನ್ನೇ ಮದುವೆಯಾಗುತ್ತೇನೆ" ಎಂದು ಸೀಸದ ಕಡ್ಡಿಯಲ್ಲಿ ಬರೆದಿದ್ದ ಬರಹ ಹೂವಯ್ಯನ ಕಣ್ಣಿಗೆ ಬಿತ್ತು. ಅದು ಸೀತೆಯದೇ ಅಕ್ಷರ ಎಂಬುದು ಹೂವಯ್ಯನಿಗೆ ತಿಳಿಯಿತು. ಸೀತೆ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂಬುದು ಆತನಿಗೆ ಸ್ಪಷ್ಟವಾಯಿತು.

ಸೀತೆ-ಹೂವಯ್ಯ (ಇಪ್ಪತ್ತನೆಯ ಅಧ್ಯಾಯ)-
ಸೀತೆ, ಹೂವಯ್ಯ ಹೇಳಿದಂತೆ ಅವನ ಟ್ರಂಕಿನಿಂದ ಭಾರಭಾರವಾದ ಬಣ್ಣ ಬಣ್ಣದ ಹೊದಿಕೆ ಇರುವ ಇಂಗ್ಲಿಷ್ ಪುಸ್ತಕಗಳನ್ನು ಹೊತ್ತುತಂದು ಹೆತ್ತ ತಾಯಿ ತನ್ನ ಮಗುವನ್ನು ಗಂಡನಿಗೆ ನೀಡುವಂತೆ ಒಂದು ವಿಧದ ಧನ್ಯತಾಭಾವ ಮತ್ತು ಅರ್ಪಣಾಭಾವದಿಂದ ಹೂವಯ್ಯನಿಗೆ ನೀಡಿದಳು. ಹೂವಯ್ಯನು ಒಂದು ಚರಿತ್ರೆಯ ಪುಸ್ತಕವನ್ನು ಸೀತೆಯ ಕೈಗೆ ಕೊಟ್ಟು ಇವುಗಳಲ್ಲಿರುವ ಚಿತ್ರಗಳನ್ನು ನೋಡುತ್ತಿರು ಎಂದು ಹೇಳಿ ತಾನು ಕಾವ್ಯ ಪುಸ್ತಕವೊಂದನ್ನು ಓದಲು ತೊಡಗಿದನು.

ಇನ್ನು ಹೂವಯ್ಯನ ವಿಚಾರಕ್ಕೆ ಬಂದರೆ, ಅದೇಕೋ ಹೂವಯ್ಯ ಪ್ರೇಮದ ಅನುಭವಕ್ಕೆ ತನ್ನನ್ನು  ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವುದಿಲ್ಲ. ಆರಂಭದಿಂದಲೇ ಅವನಲ್ಲಿ ಮಾನಸಿಕ ಸಮರವೇರ್ಪಡುತ್ತದೆ. ಹೂವಯ್ಯನ ಮನೋಭಾವ ವ್ಯಕ್ತವಾಗುವುದು ಹೀಗೆ-

ಹಲ್ಲಿಯ ಕೃಪೆ (ಅಧ್ಯಾಯ ಹದಿನೈದು)-
ಒಮ್ಮೆ ಆಕೆಗಾಗಿ ಸಂಸಾರದ ಭಾರವನ್ನು ಹೊರುವುದು ಅಷ್ಟೇನೂ ಹೀನವಲ್ಲ, ನಷ್ಟಕರವಲ್ಲ ಎಂದು ಆಲೋಚಿಸಿದನು. ಮತ್ತೊಮ್ಮೆ ತನ್ನ ಮಹದಾಕಾಂಕ್ಷೆಯ ಆದರ್ಶ ಅವನನ್ನು ತನ್ನೆಡೆಗೆ ಸೆಳೆಯುತ್ತಿತ್ತು.

ರುದ್ರವಾದರೂ ಮಧುರ ರಾತ್ರಿ (ಅರವತ್ತೊಂಬತ್ತನೇ ಅಧ್ಯಾಯ)-
ಮೊದಲು ತಾನು ವಿದ್ಯಾವಂತನಾಗಬೇಕು, ಪ್ರತಿಭಾಶಾಲಿಯಾಗಬೇಕು, ಕೀರ್ತಿ ಸಂಪಾದಿಸಬೇಕು, ಲೋಕದ ಮಹಾಪುರುಷರಂತಾಗಬೇಕು, ಸ್ವಾರ್ಥ ತ್ಯಾಗದಿಂದ ಜೀವನವನ್ನು ಪರಮ ಸಾರ್ಥಕತೆಗೆ ಬಲಿದಾನ ಕೊಡಬೇಕು - ಎಂಬ ಹೆಗ್ಗನಸು.

ಮುಂದೆ ಹೂವಯ್ಯ-ಸೀತೆಯರ ಸಂಬಂಧ ಪಡೆಯುವ ತಿರುವೂ ಅನಿರೀಕ್ಷಿತ. ಇವರ ಪ್ರೇಮದ ಕಥೆಯು  ಕಾದಂಬರಿಯ ಒಂದು ಪುಟ್ಟ ಭಾಗ ಮಾತ್ರ.

ಶತಮಾನದಷ್ಟು ಹಳೆಯದಾದರೂ  ತನ್ನದೇ ವಿಶಿಷ್ಟತೆ ವೈವಿಧ್ಯತೆಗಳ 'ಕಾನೂರು ಹೆಗ್ಗಡಿತಿ'ಯ ಮಲೆನಾಡಿನ ಲೋಕಕ್ಕೆ ಪ್ರವೇಶಿಸ ಬಯಸುವವರಿಗೆ ಅಂದಿನ  ಜನರ ಸಹಜತೆಯ, ಸರಳತೆಯ, ಸುಂದರತೆಯ  ಒಂದು ಕಿರುನೋಟವನ್ನು ಒದಗಿಸುವುದು  ಈ ಮೇಲಿನ ಭಾಗಗಳನ್ನು  ಉಲ್ಲೇಖಿಸಿದ  ಉದ್ದೇಶವಾಗಿದೆ. ಇನ್ನು ಕಾದಂಬರಿಯನ್ನು ವಿಮರ್ಶೆಯ ಒರೆಗೆ ಹಚ್ಚಿ, ಇದನ್ನು ಮಹಿಳಾವಾದ, ವರ್ಣ ವಿಚಾರ, ವರ್ಗ ಸಂಘರ್ಷ ಇತ್ಯಾದಿ ಮಜಲುಗಳಿಂದ  ನೋಡುವುದೂ ಸಾಧ್ಯವಿದ್ದರೂ ಅದು ಈ ಬರಹದ ಉದ್ದೇಶವಲ್ಲ.

ಈಚೆಗೆ ನಮ್ಮ ಪತ್ರಿಕೆಗಳು, ಮಾಧ್ಯಮ, ಸಿನಿಮಾ, ಸಾಹಿತ್ಯ ಎಲ್ಲವೂ ನಗರಗಳಿಂದ ದೂರವಿರುವ ಬಹುಸಂಖ್ಯೆಯ ಜನರ ಜೀವನಶೈಲಿ, ಪರಂಪರೆ ಇವುಗಳನ್ನೆಲ್ಲ ಒಳಗೊಳ್ಳುವುದೇ ಇಲ್ಲ. ಮಾರುಕಟ್ಟೆ ಆಧಾರಿತ ಆದ್ಯತೆ ಇದಕ್ಕೆ ಕಾರಣ ಇರಬಹುದು. ಅದೇನೇ ಇರಲಿ ಆಧುನಿಕತೆಯು ನಮ್ಮದೇ ನಾಡಿನ ಒಂದು ಭಾಗದ ಜನಸಮೂಹದಲ್ಲಿ ತಂದ  ಬದಲಾವಣೆಯ ಚಿತ್ರಣವನ್ನು ಒದಗಿಸುವ 'ಕಾನೂರು ಹೆಗ್ಗಡಿತಿ' ಯಂತಹ ಕಾದಂಬರಿಗಳು ಇಂದಿಗೂ ಮುಖ್ಯ ಎಂಬುದು ನನ್ನ ನಂಬಿಕೆ.

'ಕಾನೂರು ಹೆಗ್ಗಡಿತಿ' ಕಾದಂಬರಿಯನ್ನು ಓದಲು ಬಯಸುವವರಿಗೆ ಕಾದಂಬರಿಯ ಎಲ್ಲ ಅಧ್ಯಾಯಗಳೂ 'ಕಣಜ' ಅಂತರ್ಜಾಲ ತಾಣದಲ್ಲಿ ಲಭ್ಯವಿವೆ.


Friday, May 27, 2016

ಇಂಟರ್ನೆಟ್ ಯುಗದಲ್ಲಿ ಪುಸ್ತಕ ಪ್ರೀತಿ

ಬೀಗ ಹಾಕಿದ ಕಪಾಟಿನ ಗಾಜಿನಾಚೆಯಿಂದ
ಅವು ಇಣುಕುತ್ತವೆ,
ದಿಟ್ಟಿಸುತ್ತವೆ ಎಷ್ಟೋ ಆಸೆಯಿಂದ.
ಈಗ ತಿಂಗಳಾನುಗಟ್ಟಲೆ ಭೇಟಿಯಾಗುವುದಿಲ್ಲ ನಾವು
ಅವುಗಳ ಜೊತೆ ಉತ್ಕಟತೆಯಲಿ
ಕಳೆದ ಸಂಜೆಗಳೀಗ
ಕಂಪ್ಯೂಟರಿನ ಪರದೆಯ ಮುಂದೆ ಸರಿಯುತ್ತಿವೆ.
ಖ್ಯಾತ ಹಿಂದಿ ಕವಿ ಗುಲ್ಜಾರ್ ರ ಕವಿತೆಯೊಂದರ ಕನ್ನಡ ಅನುವಾದವಾದ  'ಪುಸ್ತಕಗಳು' ಕವಿತೆಯ ಸಾಲುಗಳಿವು. ಲೇಖಕಿ ಸಂಧ್ಯಾರಾಣಿ ಯವರ ಅನುವಾದ ಗುಲ್ಜಾರ್ ರ ಸಾಲುಗಳ ಸೂಕ್ಷ್ಮ ಸಂವೇದನೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದೆ .

ಹೊಸ ಕಾಲಮಾನದ ಹೊಸ ತಂತ್ರಜ್ಞಾನ  ಸಾಧ್ಯವಾಗಿಸಿರುವ  ಸಾಧನಗಳ ನಡುವೆ ಹಿನ್ನಡೆಗೆ ಸರಿಯುತ್ತಿರುವ ತಮ್ಮ ಭಾವ ಪ್ರಪಂಚದ ಭಾಗವೊಂದನ್ನು ನೆನೆದು ಕವಿ ಪಡುತ್ತಿರುವ ವಿಷಾದವಷ್ಟೇ ಇದಲ್ಲ. ಪುಸ್ತಕದ ಓದು ನೀಡುವ ಮುದವನ್ನು ಎಂದಾದರೂ ಅನುಭವಿಸಿರುವ ಎಲ್ಲರ ಮನದ  ಭಾವವೂ ಈ ಸಾಲುಗಳಲ್ಲಿದೆ.

ಹೀಗಾದದ್ದಾದರೂ ಹೇಗೆ?

ಕಳೆದೆರಡು ದಶಕಗಳಲ್ಲಿ ತಂತ್ರಜ್ಞಾನ ತಂದೊಡ್ಡಿರುವ ಬದಲಾವಣೆಗಳು ಅಚ್ಚರಿಗೊಳಿಸುತ್ತವೆ.  ಬೆರಳೆಣಿಕೆಯ ಟೆಲಿವಿಷನ್ ಚಾನೆಲುಗಳು , ಮನೆಗೊಂದೇ ಟೆಲಿಫೋನು ಇದ್ದ ದಿನಗಳಲ್ಲಿ  ಪುಸ್ತಕವೊಂದರಲ್ಲಿ ಮುಳುಗಿ ಹೋಗುವುದು ಸುಲಭದ ಮಾತಾಗಿತ್ತು. ಅದೇ ಇಂದಿನ ಕಾಲದಲ್ಲಿ ಮೊಬೈಲು, ಯೂಟ್ಯೂಬು, ನೂರಾರು ಟೆಲಿವಿಷನ್ ಚಾನಲುಗಳು, ೩ಡಿ  ಸಿನಿಮಾ, ಕಂಪ್ಯೂಟರ್ ಗೇಮುಗಳು ಇತ್ಯಾದಿಗಳಲ್ಲಿ ಪುಸ್ತಕಗಳೆಲ್ಲೋ  ಮರೆಯಾಗಿವೆ. 'ಪುಸ್ತಕ ಓದಲು ಇಷ್ಟ ಆದರೆ ಸಮಯವೇ ಸಿಗುತ್ತಿಲ್ಲ' ಎನ್ನುವವರ ಸಂಖ್ಯೆಯೂ ಸಾಕಷ್ಟಿದೆ.

ಇಂಟರ್ನೆಟ್ಟಿನಲ್ಲಿ ಕಂಪ್ಯೂಟರ್ ಅಥವಾ ಮೊಬೈಲಿನ ಪರದೆಯ ಮೇಲೆ ಓದುವುದಕ್ಕೂ, ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.  ಪುಸ್ತಕಗಳ ಪರ ಮತ್ತು ಇಂಟರ್ನೆಟ್ಟಿನ ವಿರುದ್ಧ ಮಾತಾಡುವುದು ಕೆಲವರಿಗೆ ಬರಿಯ ನಾಸ್ಟಾಲ್ಜಿಯ ಅನಿಸಲೂಬಹುದು. ಹಿಂದೆಂದೋ ಲಂಕೇಶ್ ಪತ್ರಿಕೆಯಲ್ಲಿ ಓದಿದ್ದ ಚಂದ್ರಶೇಖರ ಆಲೂರರ ಲಲಿತ ಪ್ರಬಂಧ (ಇದು ಇಂಟರ್ನೆಟ್, ಬ್ಲಾಗಿಂಗ್  ಇತ್ಯಾದಿ ಬರುವುದಕ್ಕೂ ಮೊದಲು) ನೆನಪಿಗೆ ಬರುತ್ತದೆ. "ತುರುಬ ನೆನೆಯುವ ಜಮಾನದ ಜನ" ಎಂದೇನೋ ಅದರ ಶೀರ್ಷಿಕೆ ಇತ್ತೆಂದು ನೆನಪು. ಪ್ರತಿಯೊಂದು ತಲೆಮಾರಿನವರು ತಮ್ಮ ಅನುಭವಗಳು, ತಮ್ಮ ಕಾಲದ ರೀತಿಗಳು ಶ್ರೇಷ್ಟ ಎಂದು ಭಾವಿಸುವುದರ ಬಗ್ಗೆ ಅವರು ಬರೆದಿದ್ದರು. ಈ ಬಗೆಯ ಯೋಚನೆಗೆ ಸುಪ್ತವಾಗಿ ನಮ್ಮಲ್ಲಿರುವ ಸ್ವಮೋಹವೇ ಕಾರಣವಿರಬಹುದೇನೋ ಎಂದೂ ಅವರು ಬರೆದಿದ್ದರು.

ಮಧ್ಯವಯಸ್ಕನ ನಾಸ್ಟಾಲ್ಜಿಯವು ಹೊಸ ತಲೆಮಾರಿನ  ಅಭಿರುಚಿಗಳ ತುಲನೆಯಲ್ಲಿ ತೊಡಕಾಗಬಾರದೆಂಬ  ಎಚ್ಚರಿಕೆಯಿಂದಲೇ ಓದಿನ ಮೇಲೆ ಇಂಟರ್ನೆಟ್ಟಿನ ಪರಿಣಾಮವನ್ನು ಗಮನಿಸುವ ಪ್ರಯತ್ನಕ್ಕೆ ತೊಡಗುತ್ತಿದ್ದೇನೆ.

ಇಂಟರ್ನೆಟ್ ಎಂದರೆ ಲೋಕದ ವಿಚಾರವೆಲ್ಲವನ್ನೂ ಲಾಳಿಕೆಯೊಂದರಲ್ಲಿ ಹಿಡಿದು ನೇರ ಮಿದುಳಿಗೆ ರವಾನಿಸುವ ವ್ಯವಸ್ಥೆ.  ಇಲ್ಲಿ ಓದುವುದೆಂದರೆ ಓದುವುದಕ್ಕಿಂತ ಪರದೆಯ ಮೇಲೆ ವೇಗವಾಗಿ ಮೂಡುವ ಮಾಹಿತಿಯ ಝರಿಯನ್ನು ಅನುಸರಿಸುವುದಷ್ಟೇ. ಅದಕ್ಕೇ ಇಲ್ಲಿ ರೀಡಿಂಗ್ ಎಂಬ ಶಬ್ದಕ್ಕೆ ಪರ್ಯಾಯವಾಗಿ ಬ್ರೌಸಿಂಗ್, ಸ್ಕಿಮ್ಮಿಂಗ್ ಇತ್ಯಾದಿ ಪದಗಳ ಬಳಕೆ ಮಾಡುವುದು ಸಾಮಾನ್ಯ. ಇಲ್ಲಿ ತಕ್ಷಣದಲ್ಲಿ, ಸುಲಭದಲ್ಲಿ  ಮಾಹಿತಿ ಲಭ್ಯವಾಗಿಸುವ ಸೌಲಭ್ಯಕ್ಕೆ ಪ್ರಾಧಾನ್ಯತೆ.

ಒಂದು ಪುಸ್ತಕದ ಓದು ನಮ್ಮಿಂದ ನಿರೀಕ್ಷಿಸುವುದೇ ಬೇರೆ. ಇಲ್ಲಿ ಓದಿದ್ದರ ಗ್ರಹಣ, ಮನನ, ಪ್ರತಿಫಲನ  ಎಲ್ಲವೂ ಅಗತ್ಯ. ಇದೊಂದು ಜೀವಂತ ವ್ಯಕ್ತಿಯೊಡನೆ ಸಂವಾದಿಸಿದಂತೆ.  ಸರಿಯಾಗಿ  ಪರಿಚಯವಾಗಲು, ಅರ್ಥವಾಗಲು  ಜೊತೆಯಲ್ಲಿ ಉತ್ಕಟತೆಯಲ್ಲಿ ಕಾಲ ಕಳೆಯಬೇಕಾಗುತ್ತದೆ.  ಪ್ರತಿಯೊಂದು ಉತ್ತಮ ಪುಸ್ತಕವೂ ನಮ್ಮ ಬಗ್ಗೆಯೇ ಒಂದಿಷ್ಟು ತಿಳಿದುಕೊಳ್ಳುವ ಅವಕಾಶವಾಗಿರುತ್ತದೆ. ಕೃತಿಕಾರರ ಯೋಚನೆ, ಭಾವನೆ, ಕಾಳಜಿಗಳು ಅವರನ್ನು ನಮಗೆ ಪರಿಚಯಿಸುವುದರೊಂದಿಗೆ ಅವರೊಂದಿಗೆ ನಾವು ಒಪ್ಪುವ ಅಥವಾ ಒಪ್ಪದಿರುವ ಕ್ರಿಯೆಯಲ್ಲಿ ನಮಗೇ ನಮ್ಮ ಪರಿಚಯವೂ ಸಾಧ್ಯವಾಗುತ್ತದೆ.

ಇಂಟರ್ನೆಟ್ ಓದಿನ ಇನ್ನೊಂದು ತೊಡಕೆಂದರೆ ಅದು ಒದಗಿಸುವ ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಇತ್ಯಾದಿ ಸಮೂಹ ಮಾಧ್ಯಮಗಳು. ಇಷ್ಟೊಂದು ಆಯ್ಕೆಗಳು ಕಣ್ಣ ಮುಂದಿರುವಾಗ ತಲ್ಲೀನತೆಯಿಂದ ಏನನ್ನೂ ಓದಿ ಮುಗಿಸುವುದು ಸುಲಭವಲ್ಲ.  ಹಾಗೆಯೇ ಓದುತ್ತಿರುವ ಲೇಖನ/ಕೃತಿಗೆ ಸಂಬಂಧಿಸಿದ ಇತರ ಹತ್ತು ಹಲವು ಮಾಹಿತಿಗಳೂ ಬೆರಳ ತುದಿಯಲ್ಲೇ ಲಭ್ಯವಿರುವುದೂ ಅನುಕೂಲದಂತೇ  ಅನಾನುಕೂಲವೂ ಆಗಿಬಿಡಲು ಸಾಧ್ಯ. ಯಾವುದೋ ಮಾಹಿತಿಯನ್ನು ಹುಡುಕಲು ಹೊರಟು ಕೊಂಡಿಯಿಂದ ಕೊಂಡಿಗೆ ಹಾರುತ್ತಾ, ಹುಡುಕಲು ಹೊರಟ ವಿಚಾರವನ್ನೇ ಮರೆಯುವ ಸಾಧ್ಯತೆಯೂ ಇದ್ದೇ  ಇರುತ್ತದೆ.

ಕಲ್ಪನೆಗೂ ನಿಲುಕದ ವೇಗದಲ್ಲಿ ಸೃಷ್ಟಿಯಾಗುತ್ತಿರುವ ಮಾಹಿತಿ ಮತ್ತು ಜ್ಞಾನದ ಶೋಧನೆ ಮತ್ತು ಬಳಕೆಗೆ ಇಂಟರ್ನೆಟ್ ಒಂದೇ ಉಳಿದಿರುವ ಮಾರ್ಗ ಎಂದು ಹೇಳುವವರು ಇದ್ದರೂ ಅದೇ ಪರಮ ಸತ್ಯವೂ ಅಲ್ಲ. ಇಂಟರ್ನೆಟ್ ನ  ವಿಶಾಲ ನಭದಲ್ಲಿ ಹರಿದಾಡುತ್ತಿರುವುದೆಲ್ಲ ಮಥಿಸಿ ತಂದ ನವನೀತವೇನಲ್ಲ.  ಯಾವುದೇ ವಿಮರ್ಶೆಗೆ ಸಂಶೋಧನೆಗೆ ಒಳಪಡದ ಗಾಳಿ ಮಾತುಗಳೂ, ಹಸಿ ಸುಳ್ಳುಗಳೂ ಇಲ್ಲಿವೆ. ಅಪಕ್ವವಾದ, ಬಾಲಿಶವಾದ ವಿಚಾರಗಳಿಗೂ ಕೆಲವೊಮ್ಮೆ ಇದು ವೇದಿಕೆ. ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿರುವ ಟ್ವಿಟರ್ ಇದಕ್ಕೊಂದು ಉದಾಹರಣೆ. ದಶಕಗಳ ಕಾಲ ಅಧ್ಯಯನ, ಸಂಶೋಧನೆ, ವಿಚಾರ ವಿಮರ್ಶೆಯ ಹಿನ್ನೆಲೆ ಇರುವವರಿಗೂ ಇಲ್ಲಿ ಕೆಲವೊಮ್ಮೆ ಕಾಸಿನ ಕಿಮ್ಮತ್ತೂ ಸಿಗದೇ ಹೋಗುವುದುಂಟು. ಯಾವುದೇ ಓದಿನ, ವಿಚಾರವಂತಿಕೆಯ ಅಪವಾದವೂ ಇಲ್ಲದ ಘೋಷಣಾ ಜೀವಿಗಳಿಗೂ ದೊಡ್ಡದೊಂದು ಧ್ವನಿವರ್ಧಕ ಇಲ್ಲಿ ಲಭ್ಯವಿರುವುದೂ ಒಂದು ವಿಪರ್ಯಾಸ.

ಇದೆಲ್ಲ ನೋಡಿದರೆ ನಾವಿಂದು ಬೀಗ ಹಾಕಿದ ಕಪಾಟಿನ ಗಾಜಿನಾಚೆಯಿಂದ ಇಣುಕುತ್ತಿರುವ, ನಾವು ಮರೆತಿರುವ ಪುಸ್ತಕಗಳತ್ತ ಮತ್ತೆ ಹೋಗುವ ಅಗತ್ಯ ಕಾಣುತ್ತಿದೆ.  ಇಂಟರ್ನೆಟ್ ನಲ್ಲಿ ಧಾರಾಳ ಲಭ್ಯವಿರುವ ಒಂದಕ್ಕೊಂದು ಸಂಬಂಧವೇ ಇರದಂತೆ ಹರಿದಾಡುತ್ತಿರುವ ಮಾಹಿತಿಯ ಬಿಡಿ ತುಂಡುಗಳಿಂದ ಹೆಚ್ಚಿನ ಲಾಭವಿಲ್ಲ. ಎಲ್ಲ ಕಾಲದ ಮಾನವ ಅಭಿವ್ಯಕ್ತಿಯ ಮುಖ್ಯ ದಾಖಲೆಯಾಗಿರುವ ಸಾಹಿತ್ಯವು ಮತ್ತೆ ನಮಗೆ ಹತ್ತಿರವಾಗಬೇಕಾದ ತುರ್ತು ಅಗತ್ಯ ಇದೆ. ಎಲ್ಲ ಉತ್ತರಗಳನ್ನೂ ತನ್ನಲ್ಲಿಟ್ಟುಕೊಂಡಿರುವ ಇಂಟರ್ನೆಟ್ ನ ಜೊತೆಗೇ ಪುಟ ಪುಟದಲ್ಲೂ ಪ್ರಶ್ನೆಗಳನ್ನು ಮೂಡಿಸುತ್ತ ಜಿಜ್ಞಾಸೆಗೆ ಹಚ್ಚುವ ಪುಸ್ತಕಗಳೂ ನಮಗೆ ಬೇಕು.

ಪುಸ್ತಕವನ್ನು ಪ್ರೀತಿಸುವವರು ಸಂಗ್ರಹಿಸುವವರು ಹಲವರು ಇದ್ದಾರೆ. ಬಹುಪಾಲು ಸಾಹಿತಿಗಳು ಈ ವರ್ಗಕ್ಕೆ ಸೇರಿದವರೇ ಆಗಿರುತ್ತಾರೆ.  ನನಗೆ ತಿಳಿದಂತೆ ಈಚಿನ ಕನ್ನಡದ ಮುಖ್ಯ ಕತೆಗಾರ, ಕಾದಂಬರಿಕಾರರಾಗಿರುವ ವಿವೇಕ್ ಶಾನಭಾಗ್ ಅವರಲ್ಲೊಬ್ಬರು. ಅವರು ಏಳು ವರ್ಷಗಳ ಕಾಲ ಯಶಸ್ವಿಯಾಗಿ, ಅಚ್ಚುಕಟ್ಟಾಗಿ ಹೊರತಂದ ವಿಶಿಷ್ಟ ಕನ್ನಡ ತ್ರೈಮಾಸಿಕ ಪತ್ರಿಕೆ 'ದೇಶ ಕಾಲ'ದ ಆರಂಭದ ದಿನಗಳಲ್ಲಿ ಚಂದಾ ಹಣ ತಲುಪಿಸುವುದಕ್ಕಾಗಿ ನಾನೊಮ್ಮೆ ಅವರ ಮನೆಗೆ ಹೋಗಿದ್ದೆ. ಗೋಡೆಯುದ್ದಕ್ಕೂ ಕಪಾಟುಗಳಲ್ಲಿ ಜೋಡಿಸಿಟ್ಟಿದ್ದ ಅವರ ಅಪಾರ ಪುಸ್ತಕ ಸಂಗ್ರಹ ನೋಡಿ ದಂಗಾಗಿದ್ದು ನನಗಿನ್ನೂ ನೆನಪಿದೆ. ಕೆಲ ತಿಂಗಳುಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ವಿವೇಕ್ ಅವರು 'ದೇಶ ಕಾಲ' ಪತ್ರಿಕೆ ಹೊರತರುವಾಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಒಂದು ಪುಸ್ತಕ ಅಥವಾ ಪತ್ರಿಕೆಗೆ ಅದರ ವಿನ್ಯಾಸ, ಅದು ಅಚ್ಚಾಗುವ ಕಾಗದ, ಕೈಯಲ್ಲಿ ಹಿಡಿಯುವ ಅನುಭವ, ಅದರ ವಾಸನೆ, ಸ್ಪರ್ಶ ಎಲ್ಲವೂ ಹೇಗೆ ಮುಖ್ಯವಾಗುತ್ತದೆ ಎಂದು ವಿವರಿಸಿದರು. ನಿಜಕ್ಕೂ ದೇಶ ಕಾಲ ಆ ಎಲ್ಲ ದೃಷ್ಟಿಯಿಂದ ಅದ್ಭುತವಾದ ಪತ್ರಿಕೆಯಾಗಿತ್ತು. ಅದೇ ಸಂದರ್ಭದಲ್ಲಿ ವಿವೇಕ್ ತಮ್ಮ ಮಾತುಗಳಲ್ಲಿ ಕೀರಂ ನಾಗರಾಜರ ಪ್ರಸ್ತಾಪ ಮಾಡಿದರು. ಪುಸ್ತಕದೊಂದಿಗೆ ಕೀರಂ ಅವರು ಹೊಂದಿರುತ್ತಿದ್ದ ಸಂಬಂಧ, ಅದರಲ್ಲಿ ಅವರು ಟಿಪ್ಪಣಿ ಮಾಡುತ್ತಿದ್ದದ್ದು, ಪುಸ್ತಕವೆಂದರೆ ಜೀವ ಇರುವ ವಸ್ತು ಎನ್ನುವ ರೀತಿಯ ಒಡನಾಟ ಇರುತ್ತಿದ್ದದ್ದು ಇದೆಲ್ಲವನ್ನೂ ಅವರು ಹೇಳಿದರು .

'ಪುಸ್ತಕ ಓದಲು ಇಷ್ಟ ಆದರೆ ಸಮಯವೇ ಸಿಗುತ್ತಿಲ್ಲ' ಎನ್ನುವವರು ಕಪಾಟುಗಳ ಬೀಗ ತೆಗೆದು ಹಿಂದೆಂದೋ ಓದಿ, ಅಥವಾ ಓದದೆಯೇ ಪೇರಿಸಿಟ್ಟಿರುವ ಕತೆ, ಕಾವ್ಯ, ಕಾದಂಬರಿ, ಆತ್ಮ ಚರಿತ್ರೆ ಇತ್ಯಾದಿ ಪುಸ್ತಕಗಳೊಡನೆ ಮತ್ತೊಮ್ಮೆ ಉತ್ಕಟತೆಯಲ್ಲಿ ಸಮಯ ಕಳೆಯುವ ಪ್ರಯತ್ನ ಮಾಡಬೇಕಿದೆ. ಕಾರಂತ, ಕುವೆಂಪು, ಅನಂತ ಮೂರ್ತಿ, ಲಂಕೇಶ್, ತೇಜಸ್ವಿ, ಚಿತ್ತಾಲ ಹೀಗೇ ಈ ನಾಡಿನ ಪ್ರತಿಭಾವಂತ ಮಹನೀಯರ ವೈಚಾರಿಕತೆ, ಜೀವನ ದೃಷ್ಟಿ, ನೈತಿಕ ಪ್ರಜ್ಞೆ ಮತ್ತೊಮ್ಮೆ ನಮ್ಮ ಸಮೂಹ ಪ್ರಜ್ಞೆಯೊಳಗೆ ಸೇರಬೇಕಾಗಿದೆ. ಅವರ ಕೃತಿಗಳು, ಕಾದಂಬರಿಗಳು ಗತಕಾಲದ ಕತೆ ಹೇಳುವವಾದರೂ, ಅಲ್ಲಿನ ಪಾತ್ರಗಳ ಸಮಸ್ಯೆಗಳು ನಮ್ಮ ಸಮಸ್ಯೆಗಳಾಗಿರದಿದ್ದರೂ, ಅಂದಿನ ಜೀವನದ ಸ್ಮೃತಿಯನ್ನು ಕಾಯ್ದಿಡುವುದು, ಅದರಿಂದ ಕಲಿಯುವುದು ಎಲ್ಲವೂ ಮುಖ್ಯ. ನಿತ್ಯಜೀವನದಲ್ಲಿ ನಾವು ಕಾಣುವುದು ಜನರ ಮೇಲ್ನೋಟ ಮಾತ್ರ. ಅದೇ ಒಂದು ಕತೆ ಅಥವಾ ಕಾದಂಬರಿಯಲ್ಲಿ ಜನರ ಮನಸ್ಸು, ಆಲೋಚನೆಗಳು, ಪ್ರಚೋದನೆಗಳು ಎಲ್ಲವನ್ನೂ ಕಾಣಲು ಸಾಧ್ಯವಿದೆ. ಎಲ್ಲ ಕಾಲದ ಜನರ ಎಲ್ಲ ಅನುಭವಗಳೂ ಸಹ ಮನುಷ್ಯರಾಗಿರುವುದೆಂದರೆ ಏನು ಎಂಬುದನ್ನು ಅರಿಯಲು ಸಹಾಯ ಮಾಡುತ್ತವೆ. ಹಲವು ಪ್ರತಿಭೆಗಳ ವರ್ಷಗಳ ಪ್ರಯತ್ನದ ಫಲವಾದ ಸಾಹಿತ್ಯ ಕೃತಿಗಳು ಜೀವನದ ಸೌಂದರ್ಯವನ್ನು ಸಂಭ್ರಮಿಸುವುದನ್ನು   ಕಲಿಸಲೂ ಶಕ್ತವಾಗಿರುತ್ತವೆ.

ಇಂಟರ್ನೆಟ್ ನ ಎಕ್ಸ್ ಪ್ರೆಸ್ ವೇ ನಲ್ಲಿ ವೇಗದಲ್ಲಿ  ನಿರರ್ಥಕವಾಗಿ ಜಾರುತ್ತ ಸಾಗುತ್ತಿರುವ ನಾವು, ಪುಸ್ತಕದ ದಟ್ಟ ಅರಣ್ಯದಲ್ಲೂ ಹೊಕ್ಕು ನೀರವದಲ್ಲಿ ಮೌನದಲ್ಲಿ ಅಚ್ಚರಿಯ ದೃಶ್ಯಗಳನ್ನು ನೋಡಬೇಕಿದೆ. 

Wednesday, December 30, 2015

ಆಡುಕಳ - ಶ್ರೀಧರ ಬಳಗಾರಮೊದಲ ಬಾರಿ 'ಆಡುಕಳ' ಎಂಬ ಹೆಸರು ಕೇಳಿದಾಗ ಇದೊಂದು ಕನ್ನಡ ಪದವೇ, ಹಾಗಿದ್ದರೆ ಏನಿದರ ಅರ್ಥ ಎಂದು ಯೋಚಿಸಿದ್ದೆ. ಪುಸ್ತಕವನ್ನು ಓದಲು ಆರಂಭಿಸಿದ ಮೇಲೆ ತಿಳಿದದ್ದು ಇದೊಂದು ಸ್ಥಳದ ಹೆಸರೆಂದು.

ನಾನು ಚಿಕ್ಕಂದಿನಲ್ಲಿ ಕಾಣುತ್ತಲೇ ಬೆಳೆದ ಚಿಕ್ಕಮಗಳೂರು ಜಿಲ್ಲೆಯ ನನ್ನ ಹಳ್ಳಿ ಪಟ್ಟಣಗಳಿಗಿಂತ ಹೆಚ್ಚೇನೂ ಬೇರೆ ಅನಿಸದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೇಟೆ, ಮಣ್ಮನೆ, ಬಿದ್ರಳ್ಳಿ, ಆಡುಕಳಗಳು ಮತ್ತು ಅಲ್ಲಿನ ಬದುಕಿನ ಕ್ರಮ ಕಾದಂಬರಿಯಲ್ಲಿ ಮೊದಲಿಗೆ ನನ್ನನ್ನು ಸೆಳೆದ ಅಂಶ.

ಕತೆಯ ಆರಂಭದಲ್ಲಿ ಮತ್ತು ಉದ್ದಕ್ಕೂ ಅಂತರ್ಗಾಮಿಯಾಗಿ ಕಾಣಿಸಿಕೊಳ್ಳುವುದು ಆಡುಕಳದ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ನಡೆಯುವ ದಾಯಾದಿ ಕಲಹ.  ಹಳ್ಳಿಯ ಅವಿಭಕ್ತ ಕುಟುಂಬಗಳ ಮೂಲಭೂತ ಹಿನ್ನೆಲೆಯಿಂದ ಬಂದ ಓದುಗರಿಗೆ ಈ ಕಲಹಗಳು ಮನುಷ್ಯ ಸಂಬಂಧಗಳನ್ನು ಹಾಳುಗೆಡವುವ ಬಗೆ, ಅವರ ಆಳದ ವಿವೇಕ, ಸದ್ಭಾವನೆಗಳು ನಾಶವಾಗುವ ಬಗೆ, ಇವುಗಳ ಅನುಭವ ಇದ್ದೇ ಇರುತ್ತದೆ. ಕಾದಂಬರಿಯ ಮುಖ್ಯ ಪಾತ್ರವಾದ ದಶರಥನ ಕುಟುಂಬವನ್ನು ಹಿನ್ನೆಲೆಯಾಗಿಸಿ, ಆಸ್ತಿಗಾಗಿ ಆ ಕುಟುಂಬದಲ್ಲಿ ನಡೆಯುವ ಸೂಕ್ಷ್ಮ ಸಂಚುಗಾರಿಕೆ, ಕುಟಿಲೋಪಾಯಗಳ ಚಿತ್ರಣವಿದೆ.

ದಾಯಾದಿ ಕಲಹ ಕೃತಿಯ ಒಂದು ಆಯಾಮವಾದರೆ, ಸಮುದಾಯವೊಂದರ ಜೀವನ ಕ್ರಮ, ಸಾಂಸ್ಕೃತಿಕ ಆಚರಣೆಯ ಚಿತ್ರಣವೂ ಪರಿಣಾಮಕಾರಿಯಾಗಿದೆ. ಖಾನಾವಳಿಯ ಗಂಗಣ್ಣ, ಮದ್ಗುಣಿ ಡಾಕ್ಟರು, ಜೇನು ಕೀಳುವ ಬಕಾಲ, ಮೈಮೇಲೆ ದೇವರು ಬರುವ ಕಾಮಾಕ್ಷಿ, ಇನ್ನು ಮೊದಲಾದ ಪಾತ್ರಗಳೂ ಉತ್ತಮವಾಗಿ ಮೂಡಿಬಂದಿವೆ.

'ಕಬ್ಬಿನ ಹಬ್ಬ' ಅಧ್ಯಾಯದಲ್ಲಿನ ಆಲೆಮನೆಯ ಚಿತ್ರಣವಂತೂ ನಾನು ಬಾಲ್ಯದಲ್ಲಿ ನೋಡಿದ್ದ ನಮ್ಮ ಕುಟುಂಬದ ಆಲೆಮನೆಯನ್ನು ಯಥಾವತ್ತಾಗಿ ನೆನಪಿಸುವಂತಿತ್ತು. ಶ್ರೀಧರ ಬಳಗಾರರು ದಟ್ಟ ವಿವರಗಳ ಮೂಲಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವುದು ಕಾದಂಬರಿಯ ಒಂದು ವೈಶಿಷ್ಟ್ಯ.

ಊರ ಜೀವನದಲ್ಲಿ ಕಾಲದ ಪ್ರಭಾವದಿಂದ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ಅವರು ವಿವರಿಸುವ ಸ್ವಾರಸ್ಯಕರ ಶೈಲಿಯ ಒಂದು ಉದಾಹರಣೆ ದಶರಥ ಭತ್ತದ ಬೇಸಾಯ ಬಿಟ್ಟು ಅಡಿಕೆ ತೋಟ ಹಾಕದಿರಲು ನಿರ್ಧರಿಸುವ ಸಂದರ್ಭ-
"ಕಡಿಮೆ ಕೆಲಸ, ಲಾಭ ಹೆಚ್ಚು ಎಂದೆನಿಸಿದರೂ ಭತ್ತದ ಬೇಸಾಯದಂತೆ ಋತು ವಿಲಾಸವನ್ನಾಗಿ ಹಬ್ಬದ ಸಂಭ್ರಮಾಚಾರಣೆಯಾಗಿ ಆಚರಿಸಲು ಸಾಧ್ಯವಿಲ್ಲವೆನಿಸಿತು. ..ಕೃಷಿ ಗದ್ದೆಯಲ್ಲಿ ಅಡಿಕೆ ತೋಟ ಹಾಕಿದ ನಂತರ ಜೀವನ ಸಂಭ್ರಮವನ್ನು ಕಳೆದುಕೊಂಡಿದ್ದನ್ನು ಅವನು ನೋಡಿದ್ದಾನೆ. ಪಂಜಿ ಸುತ್ತುತ್ತಿದ್ದವರು ಪ್ಯಾಂಟ್ ಧರಿಸಿ, ನೇಗಿಲು ಹಿಡಿಯುವ ಕೈಗಳು ಬೈಕ್ ನಡೆಸುತ್ತ ಪೇಟೆಗೆ ಹೋಗದೆ ಇರಲು ಸಾಧ್ಯವಿಲ್ಲ.." (ಪು 23-24)

ಸಾಹಿತ್ಯ ಪ್ರತಿನಿಧಿಸುವುದು ಯಾವುದೋ ಒಂದು ವಿಚಾರಧಾರೆಯನ್ನೋ, ಚಾರಿತ್ರಿಕ ವಿವರಗಳನ್ನೋ, ಅಥವಾ ನೀತಿ ವಿಚಾರಗಳನ್ನೋ ಅಲ್ಲ. ಅವೆಲ್ಲವೂ ಇಲ್ಲಿ ಮಿಳಿತಗೊಂಡಿರಬಹುದಾದರೂ ಸಾಹಿತ್ಯ ಒಳಗೊಳ್ಳುವ ಸತ್ಯಗಳು ನಮಗೆ ದಕ್ಕಬೇಕಾದರೆ ಅದನ್ನು ಪಾತ್ರಗಳ ಅನುಭವಗಳ ನೆಲೆಯಲ್ಲಿ ಶೋಧಿಸಬೇಕಾಗುತ್ತದೆ.

ಎಲ್ಲ ಶ್ರೇಷ್ಟ ಪುಸ್ತಕಗಳೂ ಹಾಗೇ. ಅವು ನಮ್ಮೊಂದಿಗೆ ಒಂದು ಬಗೆಯ ಸಾವಯವ ಸಂಬಂಧವನ್ನು ಹೊಂದಿರುತ್ತವೆ. ಕೃತಿಯ ಮೂಲಕ ಅದರ ಲೇಖಕರ ವಿಚಾರ, ಭಾವನೆ, ಕಾಳಜಿಗಳು ನಮ್ಮ ಅರಿವಿಗೆ ಬರುತ್ತವೆ. ಹಾಗೆಯೇ ಕೃತಿಯನ್ನು ಓದುವಾಗ ಅದರೊಡನೆ ನಾವು ಅಂತರಂಗದಲ್ಲಿ ನಡೆಸುವ ಸಂವಾದದಲ್ಲಿ ನಮ್ಮ ವಿಚಾರ, ಭಾವನೆ, ಕಾಳಜಿಗಳು ಸ್ಪಷ್ಟಗೊಳ್ಳುತ್ತ ಹೋಗುತ್ತವೆ.

ಒಂದು ಸಣ್ಣ ಪ್ರದೇಶದ ಸಣ್ಣ ಸಮುದಾಯವೊಂದರ ನಿತ್ಯದ ಬದುಕಿನ ವಿವರಗಳಲ್ಲೇ ಬದಲಾಗುತ್ತಿರುವ ಸಮಾಜದ ಬದಲಾಗುತ್ತಿರುವ ಮೌಲ್ಯಗಳ ಚಿತ್ರಣವನ್ನು ಒದಗಿಸಿ ಓದುಗರನ್ನೂ ಆಲೋಚನೆಗೆ ಹಚ್ಚುವ ಮುಖ್ಯವಾದ ಕೃತಿ ಆಡುಕಳ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

Sunday, November 22, 2015

ಹುಳಿಮಾವು ಮತ್ತು ನಾನು - ಇಂದಿರಾ ಲಂಕೇಶ್ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ತಮ್ಮ 'ಲಂಕೇಶ್ ಪತ್ರಿಕೆ'ಯ ಮೂಲಕ ಒಂದು ಹೊಸ ಓದುಗ ವರ್ಗವನ್ನೆ ಸೃಷ್ಟಿಸಿ, ಭಾಷೆಯ ವಿಶಿಷ್ಟ ಸಾಧ್ಯತೆಗಳ ಅರಿವು ಮಾಡಿಕೊಟ್ಟವರು ಲಂಕೇಶ್. ಅತ್ಯಂತ ಸಂಕೀರ್ಣ ವಿಚಾರಗಳನ್ನೂ ತೀರ ಸರಳ ಆದರೂ ಪರಿಣಾಮಕಾರಿಯಾದ ಶೈಲಿಯಲ್ಲಿ ಬರೆಯುವ ಸಾಧ್ಯತೆಯನ್ನು ಪರಿಚಯಿಸಿದ್ದೇ ಲಂಕೇಶ್. ೨೦೦೦ ದ ಇಸವಿಯಲ್ಲಿ ತಮ್ಮ ೬೬ ನೇ ವಯಸ್ಸಿಗೇ ತೀರಿಕೊಂಡ ಈ ಲೇಖಕನ ಸಾವು ಅನಿರೀಕ್ಷಿತವಾಗಿತ್ತು. ತಮ್ಮ ಅಗಲಿದ ಸಂಪಾದಕನಿಗೆ ಗೌರವ ಸೂಚಿಸುವ ಸಲುವಾಗಿ ಲಂಕೇಶ್ ಪತ್ರಿಕೆಯವರು ಸಿದ್ಧಪಡಿಸಿದ್ದ  "ಇಂತಿ ನಮಸ್ಕಾರಗಳು" ಎಂಬ ಶೀರ್ಷಿಕೆಯನ್ನು ಹೊತ್ತ ಸಂಚಿಕೆ ಇನ್ನೂ ನನ್ನ ಬಳಿಯಿದೆ. ಅಸಾಧಾರಣ ಪ್ರತಿಭೆಯ, ಹಾಗೆಯೇ ಒಂದು ರೀತಿಯ ವಿಕ್ಷಿಪ್ತ ವ್ಯಕ್ತಿತ್ವದ ಲಂಕೇಶರು ಒಬ್ಬೊಬ್ಬರನ್ನೂ ತಟ್ಟಿದ, ಪ್ರಭಾವಿಸಿದ ಬಗೆಯೂ ವಿಶಿಷ್ಟ.  ಇಂತಹ ಒಬ್ಬ ವ್ಯಕ್ತಿಯ ವೈಯಕ್ತಿಕ ಬದುಕಿನ ವಿವರಗಳ ಬಗೆಗಿನ ಕುತೂಹಲ ಸಹಜವೇ. ಲಂಕೇಶರು "ಹುಳಿಮಾವಿನ ಮರ" ಎಂಬ ಹೆಸರಿನಲ್ಲಿ ತಮ್ಮ ಆತ್ಮಕಥೆಯನ್ನು ಪ್ರಕಟಿಸಿದ್ದಾರಾದರೂ ಕೆಲವೊಮ್ಮೆ ಮಹಾನ್ ವ್ಯಕ್ತಿಗಳ ಜೀವನದ ಬಿಡಿ ವಿವರಗಳು ಅವರೇ ಬರೆದ ಆತ್ಮಕಥೆಗಳಿಗಿಂತ ಅವರ ಹತ್ತಿರದವರು ಬರೆವ ಕೃತಿಗಳಲ್ಲೇ ಹೆಚ್ಚಾಗಿ ಸಿಗುತ್ತವೆ. ಕುವೆಂಪು ಅವರ ವಿಚಾರದಲ್ಲೂ ಇದು ಅನುಭವಕ್ಕೆ ಬಂದಿತ್ತು. ಅವರ "ನೆನಪಿನ ದೋಣಿ" ಕೃತಿಯಲ್ಲಿ ಕಾಣದ ಎಷ್ಟೋ ವಿವರಗಳು ಅವರ ಮಗಳು ತಾರಿಣಿಯವರು ಬರೆದ "ಮಗಳು ಕಂಡ ಕುವೆಂಪು" ಪುಸ್ತಕದಲ್ಲಿ ಲಭ್ಯವಿವೆ.

ಈ ಎಲ್ಲ ಹಿನ್ನೆಲೆಯಲ್ಲಿ, ಲಂಕೇಶರ ಪತ್ನಿ ಇಂದಿರಾ ಅವರು ಬರೆದ "ಹುಳಿಮಾವು ಮತ್ತು ನಾನು" ಕೃತಿ ನನ್ನ ಗಮನಕ್ಕೆ ಬಂದಾಗ ಅದನ್ನು ಸಾಕಷ್ಟು ಕುತೂಹಲ, ನಿರೀಕ್ಷೆಯಿಂದಲೇ ಕೈಗೆತ್ತಿಕೊಂಡಿದ್ದೆ. ಪುಸ್ತಕ ಓದಿ ಮುಗಿಸುವಾಗ ಅನಿಸುವುದೇನೆಂದರೆ ಇದು ಓದುವ ಮೊದಲು ನಾನು ಅಂದುಕೊಂಡಿದ್ದಂತೆ ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳ ಕುಟುಂಬದವರು ಆ ವ್ಯಕ್ತಿಯ ಕುರಿತು ಈಗಾಗಲೇ ಸಾರ್ವಜನಿಕವಾಗಿ ಪ್ರಚಲಿತವಿರುವ ಅಭಿಪ್ರಾಯಗಳಿಗೇ ಇಂಬು ಕೊಡುವ ದೈನಂದಿನ ವಿವರಗಳನ್ನು ಹಂಚಿಕೊಳ್ಳುವ ತರಹದ ಕೃತಿ ಅಲ್ಲ. ಇಂದಿರಾ ಲಂಕೇಶ್ ಅವರು ಲಂಕೇಶರ ಸಾಹಿತ್ಯ ಜೀವನದ  ಹೆಚ್ಚಿನ ವಿವರಗಳಿಗೆ ಹೋಗದೇ ತಮ್ಮಿಬ್ಬರ ದಾಂಪತ್ಯದ ವಿವರಗಳಿಗೇ ಕೃತಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ.  ಪತಿಯಾಗಿ ಅವರಲ್ಲಿ  ತಮಗೆ ಕಂಡು ಬಂದ ಗುಣಾವಗುಣಗಳನ್ನು ನಿರೂಪಿಸುತ್ತಾ ಹೋಗುತ್ತಾರೆ. ಹಾಗೆ ನೋಡಿದರೆ ದಾಂಪತ್ಯದ ಖಾಸಗಿ ವಿಚಾರಗಳು ಕೃತಿಯೊಂದರ ಮೂಲಕ ಈ ರೀತಿ ಸಾರ್ವಜನಿಕವಾಗಿ ಪ್ರಕಟಗೊಳ್ಳುವುದು ಅಪರೂಪವೇ. ಹೆಚ್ಚಿನ ಮಟ್ಟಿಗೆ ಇಂತಹ ಕೃತಿಗಳು ಮುಜುಗರ ಉಂಟು ಮಾಡಬಹುದಾದ ವೈಯಕ್ತಿಕ ವಿವರಗಳಿಗೆ ಹೋಗದೇ ನಿರಪಾಯಕಾರಿ ಚರ್ವಿತ ಚರ್ವಣಗಳಲ್ಲೇ ಸುತ್ತುವುದೇ ಹೆಚ್ಚು. ಈ ಕೃತಿಯಲ್ಲಿ ಲೇಖಕಿ ತಮ್ಮದೇ ಬದುಕಿನ ವಿವರಗಳ ಮೂಲಕ ಬದಲಾಗುತ್ತಿರುವ ಕಾಲಮಾನದ ಬದಲಾಗುತ್ತಿರುವ ಸಂಬಂಧಗಳತ್ತ ಗಮನ ಸೆಳೆಯುವುದು  ಸ್ವಾಗತಾರ್ಹ. ಇಲ್ಲಿ ಚಿತ್ರಣಗೊಂಡಿರುವ ಹಲವು ಸಂಗತಿಗಳು ಘಟಿಸಿ ದಶಕಗಳೇ ಕಳೆದಿದ್ದರೂ ಸಂಬಂಧವೊಂದರ ವ್ಯಾಖ್ಯಾನದ ದೃಷ್ಟಿಯಿಂದ ಅವು ಇಂದಿಗೂ ಪ್ರಸ್ತುತವೇ. 

ಅತ್ಯಂತ ಸರಳವಾದ ಭಾಷೆಯಲ್ಲಿ ದೈನಂದಿನ ಜೀವನದ ಸಾಮಾನ್ಯ ವಿವರಗಳಲ್ಲೇ ತಾವು ಸಾಗಿ ಬಂದ ಘಟ್ಟಗಳನ್ನು ಕಟ್ಟಿಕೊಡುತ್ತಾ  ಆ ಮೂಲಕ  ತಮ್ಮ ವೈವಾಹಿಕ ಜೀವನದ ಏರು ತಗ್ಗುಗಳನ್ನು ಉದ್ವೇಗವಿಲ್ಲದ ದನಿಯಲ್ಲಿ ವಿವರಿಸುತ್ತಾ ಸಾಗುವ ನಿರೂಪಣೆಯಿದೆ. ಆ ಬಗೆಯ ಸಂಯಮ ಬರವಣಿಗೆಯಲ್ಲಿ ಇರದಿದ್ದರೆ ಬರಹ ದೋಷಾರೋಪಣೆಯ ಸ್ವಾನುಕಂಪದ ಮಿತಿಯಲ್ಲೇ ಉಳಿದುಬಿಡಬಹುದಾದ ಸಾಧ್ಯತೆಯಿರುತ್ತಿತ್ತು. ಮಹಿಳೆಯೊಬ್ಬಳ ಸ್ವಾಭಿಮಾನದ, ಸ್ವಾವಲಂಬನೆಯ, ಧೈರ್ಯದ, ಜೀವನ ಪ್ರೀತಿಯ ಕಥನವಾಗಿಯೂ "ಹುಳಿಮಾವು ಮತ್ತು ನಾನು" ಗೆಲ್ಲುತ್ತದೆ. ಇದರ  ಸೋಲು ಅಥವಾ ಗೆಲುವಿಗೆ ಇದೇ  ಇದೇ  ಕಾರಣವೆಂದು ನಿರ್ಧರಿಸಿಬಿಡುವಷ್ಟು ಯಾವ ಸಂಬಂಧವೂ ಸರಳವಾಗಿರುವುದಿಲ್ಲ. ಅಥವಾ ಅದು ವ್ಯಕ್ತಿಗಳ ಪ್ರತಿಭೆ ಪ್ರಸಿದ್ಧಿಗಳ ಮೇಲೂ ಅವಲಂಬಿತವಾಗಿರುವುದಿಲ್ಲ. ಯಾವ ಸಂಬಂಧವೂ ಲೈಫ್ ಟೈಮ್ ವಾರಂಟಿಯನ್ನು ಪಡೆದೇನೂ ಬಂದಿರುವುದಿಲ್ಲ. ಅಡಿಗರು ಬರೆದಂತೆ- 

ಕೂಡಲಾರದೆದೆಗಳಲ್ಲು ಕಂಡೀತು ಏಕ ಸೂತ್ರ
ಕಂಡುದುಂಟು ಬೆಸೆದೆದೆಗಳಲ್ಲು ಭಿನ್ನತೆಯ ವಿಕಟ ಹಾಸ್ಯ

ಯಾವ ಕಾರಣಕ್ಕೋ  ಭಿನ್ನತೆಯು ಮೂಡಿದಾಗ ಪ್ರತಿಕ್ರಯಿಸುವ ಬಗೆ ನಿಜಕ್ಕೂ  ವ್ಯಕ್ತಿಯ ವ್ಯಕ್ತಿತ್ವವನ್ನೇ ನಿರ್ಧರಿಸುವ  ಪ್ರಶ್ನೆಯಾಗಿರುತ್ತದೆ. ಅರವತ್ತು ಎಪ್ಪತ್ತರ ದಶಕದಲ್ಲೇ ಅಂದಿನ ಸಾಮಾಜಿಕ ವಾತಾವರಣಕ್ಕೆ ಸವಾಲೆನ್ನುವಂತೆ  ತಮ್ಮ ಘನತೆಗೆ, ಅಭಿಮಾನಕ್ಕೆ ಯಾವುದೇ ಕುಂದು ತರದಂತೆ ತಮ್ಮದೇ ಸ್ವತಂತ್ರ ಅಸ್ತಿತ್ವದ ಅಸ್ಮಿತೆಯ ಸಾಧನೆಗೆ ಹೋರಾಡುವ  ಇಂದಿರಾ ಅವರ ಆಯ್ಕೆ ಗಮನಿಸಬೇಕಾದದ್ದು .  

ಇಷ್ಟೆಲ್ಲಾ ಆದಾಗಲೂ ತಮ್ಮ ಬರವಣಿಗೆಯುದ್ದಕ್ಕೂ ಎಲ್ಲಿಯೂ ತಮಗೆದುರಾದ ಸನ್ನಿವೇಶಗಳ ಕಾರಣಕ್ಕೆ ಲಂಕೇಶರ ವ್ಯಕ್ತಿತ್ವವನ್ನು ನೇರವಾಗಿ ಹೀಗಳೆಯುವಂತಹ ಪ್ರಸ್ತಾಪಗಳೇ ಇಲ್ಲ. ತಮಗಿಷ್ಟವಾಗದ ಅವರ ಗುಣಗಳ ಬಗೆಗೆ ಬರೆವಾಗಲೂ ಇಂದಿರಾ ಅವರಲ್ಲಿ ಅಂತರ್ಗಾಮಿಯಾದ ಒಂದು ಪ್ರೀತಿ, ಗೌರವ, ಸಹನೆ ಕಾಣಬರುತ್ತದೆ.  ಜೊತೆಗೇ ಉದ್ದಕ್ಕೂ ಜೀವನವನ್ನು ಧೈರ್ಯದಿಂದ ಉತ್ಸಾಹದಿಂದ ಛಲದಿಂದ ಎದುರಿಸಿದ ಒಬ್ಬ ಮಹಿಳೆಯ ಚಿತ್ರಣ ಕಾಣುತ್ತದೆ. ಲಂಕೇಶರಂತಹ ಪ್ರಖರ  ವ್ಯಕ್ತಿತ್ವದ ಮನುಷ್ಯನ ಮಡದಿಯಾಗಿಯೂ ತನ್ನ ವೈಯಕ್ತಿಕತೆಯನ್ನು ಸ್ವಲ್ಪವೂ ಬಿಟ್ಟುಕೊಡದೆ ತಾನೂ ಬಿಸಿನೆಸ್ಸ್ ನಡೆಸಿ, ತೋಟವನ್ನೂ ಮಾಡಿ ತಮ್ಮ ಆತ್ಮ ಗೌರವವನ್ನು ಕಾದುಕೊಳ್ಳುವುದು ಓದುಗರನ್ನು ತಟ್ಟದೆ ಇರದು. ಇವರ ಮೂವರು ಮಕ್ಕಳಾದ ಪತ್ರಕರ್ತೆ ಗೌರಿ, ಚಿತ್ರ ನಿರ್ದೇಶಕ ಇಂದ್ರಜಿತ್, ಹಾಗೂ ಚಿತ್ರ ನಿರ್ದೇಶಕಿ ಕವಿತಾ ರ ಬಗೆಗೂ ಕೃತಿಯುದ್ದಕ್ಕೂ ಕೆಲವು ವಿವರಗಳು ಕಾಣಸಿಗುತ್ತವೆ. 

ಲಂಕೇಶರ ಆತ್ಮಚರಿತ್ರೆ "ಹುಳಿಮಾವಿನ  ಮರ" ದಲ್ಲಿ ಅವರ ಕುಟುಂಬದ ವಿವರಗಳು ಅಷ್ಟಾಗಿ ಇಲ್ಲ. ಇನ್ನು ಅವರು ಸಂಪಾದಕರಾಗಿದ್ದಾಗ ಲಂಕೇಶ್ ಪತ್ರಿಕೆಯಲ್ಲಿ ಅಲ್ಲಲ್ಲಿ ಅವರ ಮಕ್ಕಳ ಬಗೆಗಿನ ಕೆಲ ವಿವರಗಳು ಪ್ರಸ್ತಾಪವಾಗುತ್ತಿದ್ದರೂ ಇಂದಿರಾ ಅವರ ಬಗೆಗೆ ಅವರು ಬರೆದಿದ್ದು ಬಹಳ ವಿರಳ. ಆದರೆ "ಹುಳಿಮಾವು ಮತ್ತು ನಾನು" ಕೃತಿಯಲ್ಲಿ  ಮೊದಲಿಂದ ಕಡೆಯವರೆಗೂ ಲಂಕೇಶರ ಉಪಸ್ಥಿತಿಯಿದೆ. ಹೀಗಾಗಿ ಲಂಕೇಶರ ಅಭಿಮಾನಿಗಳಿಗೆ ಅವರ ಜೀವನದ ವೈಯಕ್ತಿಕ ಮಗ್ಗುಲಿನ ಪರಿಚಯದ ದೃಷ್ಟಿಯಿಂದ ಈ ಕೃತಿ ಉಪಯುಕ್ತ. ಎಲ್ಲ ವಿವರಗಳೂ ಅವರ ವ್ಯಕ್ತಿತ್ವದ ಪ್ರಕಾಶವನ್ನು ಹೆಚ್ಚಿಸುವಂತವೇನೂ ಅಲ್ಲವಾಗಿದ್ದರೂ ಒಬ್ಬ ಅಪ್ರತಿಮ ಪತ್ರಕಾರನಾಗಿ, ಬರಹಗಾರನಾಗಿ ಕನ್ನಡ ಜಾಣ ಜಾಣೆಯರ ಹೃದಯದಲ್ಲಿ ಲಂಕೇಶ್ ಹೊಂದಿರುವ ಸ್ಥಾನಕ್ಕಂತೂ ಈ ಕೃತಿಯಿಂದ ಹಾನಿಯಾಗುವ ಸಾಧ್ಯತೆಗಳು ನನಗೆ ಕಾಣಿಸಲಿಲ್ಲ.  

Wednesday, April 08, 2015

ಒಂದು ಬದಿ ಕಡಲು - ವಿವೇಕ್ ಶಾನಭಾಗ್ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು

ಹೀಗೆ ಆರಂಭವಾಗುವ ದಿನಕರ ದೇಸಾಯಿಯವರ ಕರಾವಳಿ ಜಿಲ್ಲೆ ಉತ್ತರ ಕನ್ನಡದ ಬಗೆಗಿನ ಪದ್ಯದ ಸಾಲಿನಿಂದ ಪಡೆದ ಹೆಸರಿನ ಈ ಕಾದಂಬರಿಯಲ್ಲಿನ ಮುಖ್ಯ ಕಥನವು ಘಟಿಸುವುದು ಅದೇ ಕರಾವಳಿ ಜಿಲ್ಲೆಯಲ್ಲಿ.  ಯಶವಂತ ಚಿತ್ತಾಲರಿಂದ ಹಿಡಿದು ಈಚೆಗಿನ ಹಲವು ಬರಹಗಾರರ ಕೃತಿಗಳಲ್ಲಿ ಈ ಜಿಲ್ಲೆಯ ಬದುಕಿನ ಚಿತ್ರಣ ಪರಿಣಾಮಕಾರಿಯಾಗಿ ಮೂಡಿಬಂದಿರುವುದು ವಿಶೇಷ.

ಈಚಿನ ವರ್ಷಗಳಲ್ಲಿ ಕನ್ನಡದಲ್ಲಿ ಒಂದು ಪ್ರಜ್ಞಾವಂತ ಓದುಗ ವರ್ಗವನ್ನೆ ಗುರಿಯಾಗಿಸಿಕೊಂಡು ಏಳು ವರ್ಷಗಳ ಕಾಲ ಅತ್ಯುತ್ತಮವಾಗಿ ಹಾಗೂ ಅತ್ಯಂತ ಯಶಸ್ವಿಯಾಗಿ ಪ್ರಕಟಣೆ ಕಂಡ 'ದೇಶ ಕಾಲ' ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಪರಿಚಿತರಾಗಿದ್ದ ವಿವೇಕ್ ಶಾನಭಾಗ್ ಅವರ ಕಾದಂಬರಿ ಎಂದೊಡನೆ ಸಹಜವಾಗಿಯೇ ಕೃತಿಯ ಕುರಿತು ಕುತೂಹಲವಿತ್ತು. ಹೊಸ ಆರ್ಥಿಕ ವ್ಯವಸ್ಥೆ, ಮಾರುಕಟ್ಟೆ, ಜಾಗತೀಕರಣ, ನಗರೀಕರಣ ಇತ್ಯಾದಿಗಳು ದೈನಂದಿನ ಜೀವನದಲ್ಲಿ ತಂದೊಡ್ಡುವ ಸವಾಲುಗಳನ್ನೂ ಬದಲಾವಣೆಗಳನ್ನೂ ಸಮರ್ಥವಾಗಿ ಅಭಿವ್ಯಕ್ತಿಸಲು ದೇಶ ಕಾಲ ಒಂದು ಉತ್ತಮ ವೇದಿಕೆಯಾಗಿ ರೂಪುಗೊಂಡಿತ್ತು. ಹೊಸ ಸಾಹಿತ್ಯದ ಪ್ರಕಾಶನದ ಜೊತೆಗೇ ಈ ಪತ್ರಿಕೆಯು ವರ್ತಮಾನದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತಿದ್ದ ಬಗೆಯೂ ವಿಶಿಷ್ಟವಾಗಿರುತ್ತಿತ್ತು. ಅಂತಹದ್ದೊಂದು ಪತ್ರಿಕೆಯ ರೂವಾರಿಯಾಗಿದ್ದ ಲೇಖಕರು ತಮ್ಮ  'ಒಂದು ಬದಿ ಕಡಲು' ಕೃತಿಗೆ ನಗರದಿಂದ ದೂರದಲ್ಲಿರುವ ಚಿಕ್ಕದೊಂದು ಊರಿನ ಜೀವನದ  ಹಿನ್ನೆಲೆಯನ್ನು ಆರಿಸಿಕೊಂಡ ಬಗ್ಗೆಯೂ ಕುತೂಹಲವಿತ್ತು.

ಆಧುನಿಕ ತಂತ್ರಜ್ಞಾನ ಸಂಬಂಧದ ವೃತ್ತಿಗಳನ್ನು ಅವಲಂಬಿಸಿ ನಗರವಾಸಿಗಳಾಗಿರುವ  ನಮ್ಮಂತಹವರು ಈ ಸಮಕಾಲೀನ ತಂತ್ರಜ್ಞಾನ ತಂದು ಹೇರುವ ಒಂದು ನಿರ್ದಿಷ್ಟವೂ ಏಕರೂಪಿಯೂ ಆದ ಜೀವನ ಕ್ರಮಕ್ಕೆ ಪಕ್ಕಾಗಿರುತ್ತೇವೆ. ಎಷ್ಟರಮಟ್ಟಿಗೆಂದರೆ, ಕೆಲವೇ ವರುಷಗಳ ಹಿಂದೆ ನಮ್ಮ ಜೀವನದ ಭಾಗವೇ ಆಗಿದ್ದ ಹಳ್ಳಿ ಮತ್ತು ಕಿರುಪಟ್ಟಣಗಳ ಬದುಕು ಇಂದು ನಮಗೆ ಸಂಬಂಧವೇ ಪಡದ ಬೇರೊಂದು ಲೋಕ ಎಂದು ಅನಿಸುವಷ್ಟು.  ಆದರೆ ಸಾಹಿತ್ಯ ಎಂದರೆ ಎಲ್ಲ ಜೀವನ ಕ್ರಮಗಳ, ಎಲ್ಲ ಜನರ ಅನುಭವಗಳ ಅಭಿವ್ಯಕ್ತಿ.

'ಒಂದು ಬದಿ ಕಡಲು' ಪ್ರತಿನಿಧಿಸುವ ಜೀವನ ಕ್ರಮ ಸದ್ಯಕ್ಕೆ ನಮ್ಮದಲ್ಲದೆ ಇರಬಹುದು. ಇಲ್ಲಿನ ಪಾತ್ರಗಳ ಗೋಳುಗಳು, ಗೋಜಲುಗಳು ನಮಗೆ ಸಂಬಂಧವೇ ಪಡದಿರಬಹುದು. ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಇಲ್ಲಿನ ಪಾತ್ರಗಳು ಜೀವನ ತಂದು ಒಡ್ಡುವ ಸಮಸ್ಯೆಗಳಿಗೆ ಸಂಕಷ್ಟಗಳಿಗೆ ತಾಳ್ಮೆಯಿಂದ ಧೈರ್ಯದಿಂದ ನಿರುದ್ವಿಗ್ನತೆಯಿಂದ ಎದಿರಾಗುವ ಬಗೆ. ಅದರಲ್ಲೊಂದು ಪಾಠವಿದೆ. ಆ ದೃಷ್ಟಿಯಿಂದ ಎಲ್ಲ ಉತ್ತಮ ಕೃತಿಗಳಿಗೂ ಒಂದು ಪ್ರಸ್ತುತತೆಯಿರುತ್ತದೆ.

ಇಪ್ಪತ್ತರ ವಯಸ್ಸಿಗೇ ವಿಧವೆಯರಾದರೂ ಧೈರ್ಯಗೆಡದೆ ಆತ್ಮವಿಶ್ವಾಸದಿಂದ ಜೀವನ ಸಾಗಿಸುವ ಅತ್ತೆ-ಸೊಸೆ ಪಂಢರಿ ಮತ್ತು ಯಮುನಾ, ಅನಾಥೆಯಾದ ತನ್ನ ತಂಗಿಯ ಮಗಳು ಸುನಂದೆಯನ್ನು ಕರೆತಂದು ಸಾಕಿ, ಮುಂದೆ ತನ್ನೆಲ್ಲ ಚಾಣಾಕ್ಷತೆಯನ್ನುಪಯೋಗಿಸಿ ಉತ್ತಮ ವರನಾದ ಪುರಂದರನ ಜತೆ ಅವಳ ವಿವಾಹವನ್ನೂ ಮಾಡುವ 'ಜೀರಿ ಮೆಣಸು' ಗೋದಾವರಿ, ನಾಟಕದ ಖಯಾಲಿಗೆ ಬಿದ್ದ ಯಶವಂತ, ಸಮಾಜದ ಕಟ್ಟುಪಾಡನ್ನು ಮೀರುವ ಧೈರ್ಯ ತೋರುವ ರಮಾಕಾಂತ ಮಾಸ್ತರ, ಹೀಗೇ ಹಲವು ಪಾತ್ರಗಳು ನೆನಪಲ್ಲುಳಿಯುತ್ತವೆ.

ಉತ್ತರ ಕನ್ನಡದ ಜನರು ತಮ್ಮ ಎಂದಿನ ಧಾವಂತವಿಲ್ಲದ ಸಾವಧಾನದ ಬದುಕಿನಲ್ಲಿ ಅನಿವಾರ್ಯವಾಗಿ ಎದುರಾಗುವ ಸನ್ನಿವೇಶಗಳನ್ನು ನಿರ್ವಿಕಾರವಾಗಿ ನಿಭಾಯಿಸುವುದರ ಚಿತ್ರಣ ಕೃತಿಯಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.